ದಿಲ್ಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಕಚ್ಚಾಟ ಆರಂಭ

ಹೊಸದಿಲ್ಲಿದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಬೆನ್ನ ಹಿಂದೆಯೇ ಕಾಂಗ್ರೆಸ್‌ನಲ್ಲಿ ಬಂಡಾಯದ ಬೇಗುದಿ ಸ್ಫೋಟಗೊಂಡಿದೆ. ಸ್ವಂತ ಗೆಲುವಿನ ಬಗ್ಗೆ ಯೋಚಿಸದೇ ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶದಿಂದ ಆಪ್‌ ಬೆಂಬಲಿಸಿ ‘ಮತ ತ್ಯಾಗ’ ಮಾಡುವ ಕ್ರಮಕ್ಕೆ ಪಕ್ಷದೊಳಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಿಜೆಪಿಯನ್ನು ಸೋಲಿಸಲು ಆಪ್‌ಗೆ ‘ಹೊರಗುತ್ತಿಗೆ’ ನೀಡಿತ್ತು ಎನ್ನುವ ಆರೋಪ ಈಗ ಮುಖಂಡರ ನಡುವಿನ ಕೆಸರೆರಚಾಟಕ್ಕೆ ವೇದಿಕೆ ಒದಗಿಸಿಕೊಟ್ಟಿದೆ.

ಚುನಾವಣಾ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ, ಸಮಾಜದಲ್ಲಿ ಒಡಕು ಸೃಷ್ಟಿಸುವ ಬಿಜೆಪಿಗೆ ದಿಲ್ಲಿ ಜನತೆ ತಕ್ಕಪಾಠ ಕಲಿಸಿದ್ದಾರೆಂದು ಹೇಳಿ ಅದರ ಸೋಲನ್ನು ಸಂಭ್ರಮಿಸಿ, ಆಪ್‌ ಗೆಲುವನ್ನು ಟ್ವಿಟರ್‌ನಲ್ಲಿ ಕೊಂಡಾಡಿದ್ದರು. ಇವರ ಜತೆಗೆ ಕೈ ಪಾಳಯದ ಇನ್ನೂ ಕೆಲ ನಾಯಕರು ತಮ್ಮ ಸೋಲು ಮರೆಮಾಚಲು ಆಪ್‌ಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು! ಈ ಬೆಳವಣಿಗೆ ಬಳಿಕ ದಿಲ್ಲಿ ಕಾಂಗ್ರೆಸ್‌ ನಾಯಕಿ ಶರ್ಮಿಷ್ಠಾ ಮುಖರ್ಜಿ ”ಸರ್‌, ಎಲ್ಲ ಮರ್ಯಾದೆಯನ್ನು ನಿಮಗೆ ನೀಡಿ, ಒಂದು ಪ್ರಶ್ನೆ ಕೇಳ ಬಯಸುತ್ತೇನೆ. ರಾಜ್ಯದಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್‌ ಬೇರೆಯವರಿಗೆ ಹೊರಗುತ್ತಿಗೆ ನೀಡಿತ್ತೇ? ಇಲ್ಲ ಎನ್ನುವುದಾದರೆ ಆಪ್‌ ಗೆಲುವನ್ನು ನೀವು ಆ ಪರಿ ಸಂಭ್ರಮಿಸಿದ್ದು ಯಾಕೆ? ಹೊರಗುತ್ತಿಗೆ ನೀಡಿದ್ದು ‘ಹೌದು’ ಎನ್ನುವುದಾದರೆ ದಿಲ್ಲಿಯಲ್ಲಿ ನಮ್ಮ ‘ಅಂಗಡಿ’ ಮುಚ್ಚುವುದೇ ವಾಸಿ!,” ಎಂದು ಚಿದಂಬರಂಗೆ ಪ್ರಶ್ನೆಗಳನ್ನು ಕೇಳಿ ಛೇಡಿಸಿದ್ದಾರೆ.

ಸರ್ಜಿಕಲ್ಆ್ಯಕ್ಷನ್ಬೇಕಿದೆ
ಇನ್ನೊಂದೆಡೆ ಕಾಂಗ್ರೆಸ್‌ ಹಿರಿಯ ಮುಖಂಡ ವೀರಪ್ಪ ಮೊಯಿಲಿ ದಿಲ್ಲಿ ಸೋಲಿಗೆ ಕಳವಳ ವ್ಯಕ್ತಪಡಿಸಿದ್ದು ”ಪರಾಭವಕ್ಕೆ ಪರಸ್ಪರ ದೋಷಾರೋಪ ಮಾಡಿಕೊಂಡು ಕಾಲ ಕಳೆಯುವುದರಲ್ಲಿಅರ್ಥ ಇಲ್ಲ. ಎಲ್ಲರೂ ಇದರ ಹೊಣೆ ಹೊರಬೇಕು. ಸರ್ಜಿಕಲ್‌ ದಾಳಿಯಂತಹ ಕಠಿಣ ಕ್ರಮದ ಮೂಲಕ ಪಕ್ಷವನ್ನು ಒಗ್ಗಟ್ಟಿನಿಂದ ಮರು ಸಂಘಟಿಸಿ, ಮುನ್ನಡೆಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ,” ಎಂದಿದ್ದಾರೆ. ಕಾಲಕ್ಕೆ ತಕ್ಕಂತೆ ಕಾರ್ಯತಂತ್ರ ಅಳವಡಿಸಿಕೊಂಡು ಪಕ್ಷವನ್ನು ಪುನರುಜ್ಜೀವಗೊಳಿಸದಿದ್ದರೆ ಉಳಿಗಾಲವಿಲ್ಲ ಎಂದೂ ಎಚ್ಚರಿಸಿದ್ದಾರೆ.

ಪಿ.ಸಿ.ಚಾಕೊ ರಾಜೀನಾಮೆ
ಚುನಾವಣೆಯಲ್ಲಿ ಶೂನ್ಯ ಗಳಿಕೆಯ ಅವಮಾನದಲ್ಲಿ ಹಿರಿಯ ನಾಯಕ ಪಿ.ಸಿ.ಚಾಕೊ ಎಐಸಿಸಿ ದಿಲ್ಲಿ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಸೋಲಿನ ಹೊಣೆ ಹೊತ್ತುಕೊಳ್ಳಲು ಹಿಂದೇಟು ಹಾಕಿರುವ ಅವರು, ಮಾಜಿ ಸಿಎಂ ದಿ. ಶೀಲಾ ದೀಕ್ಷಿತ್‌ ಅವರತ್ತ ಬೆಟ್ಟು ಮಾಡಿದ್ದಾರೆ. ದೀಕ್ಷಿತ್‌ ಮೂರನೇ ಅವಧಿ ಮುಖ್ಯಮಂತ್ರಿಯಾಗಿ ಇಳಿದ ನಂತರ, 2013ರಿಂದ ಪಕ್ಷದ ಪತನ ಆರಂಭಗೊಂಡಿತು ಎಂದಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ