ವಿಹಾರಿ ನೌಕೆಯಲ್ಲಿನ ಒಟ್ಟು 218 ಜನರಿಗೆ ಕೋವಿಡ್-19 ವೈರಾಣು ಸೋಂಕು

ಯೋಕೋಹಾಮಾ, ಫೆ.13- ಜಪಾನ್ ಕರಾವಳಿ ಪ್ರದೇಶದಲ್ಲಿರುವ ಐಷಾರಾಮಿ ನೌಕೆಯಲ್ಲಿನ ಪ್ರಯಾಣಿಕರಿಗೆ ಕೊರೋನಾ ವೈರಸ್ ಸೋಂಕು ವಿಷದಂತೆ ಏರುತ್ತಲೇ ಇದೆ. ಇಂದು ಮತ್ತೆ ಇನ್ನೂ 44 ಜನರಿಗೆ ಸೋಂಕು ಪತ್ತೆಯಾಗಿದೆ.

ಇದರೊಂದಿಗೆ ವಿಹಾರಿ ನೌಕೆಯಲ್ಲಿನ ಒಟ್ಟು 218 ಜನರಿಗೆ ಕೋವಿಡ್-19 ವೈರಾಣು ಸೋಂಕು ಬಾಧಿಸುತ್ತಿದೆ.

ಓರ್ವ ಕನ್ನಡಿಗ ಸೇರಿ 138 ಭಾರತೀಯರು ಹಾಗೂ 3700 ಪ್ರವಾಸಿಗರು ಇರುವ ಜಪಾನ್‍ನ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಮತ್ತೆ 39 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಪೈಕಿ ಇಬ್ಬರು ಭಾರತೀಯರಿಗೂ ಸೋಂಕು ತಗುಲಿದೆ ಎಂದು ನಿನ್ನೆ ದೃಢಪಟ್ಟಿತ್ತು. ಇದರೊಂದಿಗೆ ಹಡಗಿನಲ್ಲಿ ನಿನ್ನೆ ಸೋಂಕು ಪೀಡಿತರ ಸಂಖ್ಯೆ 174ಕ್ಕೆ ಏರಿಕೆಯಾಗಿತ್ತು. ಆದರೆ, ಇಂದು ಮತ್ತೆ 44 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಈ ಸಂಖ್ಯೆ 218ಕ್ಕೆ ಹೆಚ್ಚಳವಾಗಿದೆ.

ಜಪಾನ್‍ನ ಪ್ರವಾಸಿ ಹಗಡಿನಲ್ಲಿ 132 ಭಾರತೀಯ ಸಿಬ್ಬಂದಿ ಮತ್ತು 6 ಭಾರತೀಯ ಪ್ರವಾಸಿಗರು ಇದ್ದಾರೆ. ಈ ಪೈಕಿ ಯಾವ ಭಾರತೀಯ ಸಿಬ್ಬಂದಿಗೆ ಸೋಂಕು ತಗುಲಿದೆ ಎಂಬುದರ ಮಾಹಿತಿ ಬಹಿರಂಗಪಡಿಸಲಾಗಿಲ್ಲ. ಈ ನಡುವೆ ಹಡಗಿನಲ್ಲಿ ಕೊರೋನಾಕ್ಕೆ ತುತ್ತಾಗದ ಭಾರತೀಯರ ರಕ್ಷಣೆ ನಿಟ್ಟಿನಲ್ಲಿ ಭಾರತದ ದೂತವಾಸ ಜಪಾನ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದೆ.

ಹಡಗಿನಲ್ಲಿರುವ ಪ್ರವಾಸಿಗರಿಂದ ಕೊರೋನಾ ಹಬ್ಬುವ ಭೀತಿ ಇರುವ ಹಿನ್ನೆಲೆಯಲ್ಲಿ ಫೆ.19ರವರೆಗೂ ಹಡಗನ್ನು ಪ್ರತ್ಯೇಕ ಸ್ಥಳದಲ್ಲಿರಿಸಲಾಗಿದೆ.

ಹಡಗಿನ ಒಳಗಿನಿಂದ ಯಾರಿಗೂ ಹೊರಗೆ ಬರಲು ಬಿಡಲಾಗಿಲ್ಲ. ಹಡಗಿನಲ್ಲಿ ಕೂಡ ಯಾರಿಗೂ ಅವಶ್ಯಕತೆ ಇಲ್ಲದ ಹೊರತಾಗಿ ಕೋಣೆಯಿಂದ ಹೊರಬರದಂತೆ ಸೂಚಿಸಲಾಗಿದೆ. ಸೋಂಕು ಪೀಡಿತರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ