ಜೈಪುರ/ಹೈದರಾಬಾದ್, ಜ.27- ಚೀನಾದಿಂದ ಭಾರತಕ್ಕೆ ವಾಪಸ್ಸಾಗಿರುವ ರಾಜಸ್ಥಾನ, ಬಿಹಾರ್ ಹಾಗೂ ತೆಲಂಗಾಣದ ಹಲವು ಮಂದಿಗೆ ಕೊರೊನಾ ವೈರಸ್ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ.
ಚೀನಾದಲ್ಲಿ ಎಂಬಿಬಿಎಸ್ ಮುಗಿಸಿ ಭಾರತಕ್ಕೆ ಬಂದ ರಾಜಸ್ಥಾನ ಮೂಲದ ವ್ಯಕ್ತಿಯಲ್ಲಿ ಶಂಕಿತ ಕೊರೊನಾ ವೈರಸ್ ಕಂಡುಬಂದಿದ್ದು, ರೋಗಿಯನ್ನು ತಕ್ಷಣವೇ ಪ್ರತ್ಯೇಕ ಚಿಕಿತ್ಸಾ ಕೊಠಡಿಯಲ್ಲಿ ಇರಿಸುವಂತೆ ರಾಜ್ಯ ಆರೋಗ್ಯ ಸಚಿವ ರಘು ಶರ್ಮಾ, ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದಾರೆ.
ಅಲ್ಲದೇ ರೋಗಿಯ ಕುಟುಂಬ ಸದಸ್ಯರನ್ನೂ ತಪಾಸಣಾ ಪ್ರಕ್ರಿಯೆಗೆ ಒಳಪಡಿಸುವಂತೆ ಹಾಗೂ ರೋಗಿಯಿಂದ ಸಂಗ್ರಹಿಸಿದ ಸ್ಯಾಂಪಲ್ಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಸಚಿವರು ಸೂಚಿಸಿದ್ದಾರೆ.
ಭಾನುವಾರ ಚೀನಾದಿಂದ ರಾಜಸ್ಥಾನದ ನಾಲ್ಕು ಜಿಲ್ಲೆಗಳ 18 ಮಂದಿ ದೇಶಕ್ಕೆ ಬಂದಿದ್ದು, ಅವರೆಲ್ಲರನ್ನೂ 28 ದಿನಗಳವರೆಗೆ ತಪಾಸಣೆಯಲ್ಲಿರಿಸುವಂತೆ ಆಯಾ ಜಿಲ್ಲೆಗಳ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶಿಸಿರುವುದಾಗಿ ಶರ್ಮಾ ತಿಳಿಸಿದ್ದಾರೆ.
ಅಲ್ಲದೆ ಇದೇ ದಿನ ಚೀನಾದಿಂದ ತೆಲಂಗಾಣ ಹೈದರಾಬಾದ್ ಮೂಲದ ನಾಲ್ವರು ಭಾರತಕ್ಕೆ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಅವರನ್ನು ತಪಾಸಣಾ ಪ್ರಕ್ರಿಯೆಗೆ ಒಳಪಡಿಸಿದಾಗ ಅವರಲ್ಲಿ ಒಬ್ಬ ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿರುವುದಾಗಿ ತಿಳಿದುಬಂದಿದೆ.
ನಾಲ್ವರನ್ನೂ ರಕ್ತ ಪರೀಕ್ಷೆಗೆ ಒಳಪಡಿಸಿ ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳುಹಿಸಲಾಗಿದ್ದು, ರೋಗಿಯನ್ನು ನಗರದ ಫೀವರ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸಾ ಕೊಠಡಿಯಲ್ಲಿ ಇರಿಸಲಾಗಿದೆ.
ಬಿಹಾರದಲ್ಲೂ ಶಂಕಿತ ಕೊರೊನಾ ವೈರಸ್ಜನವರಿ 22ರಂದು ಚೀನಾದಿಂದ ಬಿಹಾರ್?ಗೆ ಬಂದ ಚಪ್ರಾದ ಶಾಂತಿನಗರ ಮೂಲದ ವಿದ್ಯಾರ್ಥಿನಿಯೋರ್ವಳು ಕೂಡ ಶಂಕಿತ ಕೊರೊನಾ ವೈರಸ್ ಲಕ್ಷಣಗಳಿಗೆ ಹೋಲಿಕೆಯಾಗುವ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವುದಾಗಿ ವರದಿಯಾಗಿದೆ. ಆಕೆಯನ್ನು ಚಪ್ರಾದ ಸದರ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಾಖಲಿಸಲಾಗಿದೆ.
ಈ ವಿಷಯದಲ್ಲಿ ಜಾಗರೂಕರಾಗಿರಿ ಎಂದು ಬಿಹಾರ ಆರೋಗ್ಯ ಸಚಿವರು ರಾಜ್ಯದ ಎಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ಸರ್ಕಾರಿ ವೈದ್ಯರಿಗೆ ಸೂಚನೆ ನೀಡಿದ್ದಾರೆ.