ಬೆಂಗಳೂರು,ಡಿ.30- ಮುಖ್ಯಮಂತ್ರಿ ಯಡಿಯೂರಪ್ಪರವರು ವಿದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿರುವುದರಿಂದ ಸಚಿವ ಸಂಪುಟ ವಿಸ್ತರಣೆ ಹಾಗೂ ಜ.20ರಿಂದ ನಡೆಯಬೇಕಾಗಿದ್ದ ವಿಧಾನಮಂಡಲದ ಜಂಟಿ ಅಧಿವೇಶನ ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ.
ರಾಜ್ಯದ ಸಚಿವರ ಪಟ್ಟಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಂದ ಒಪ್ಪಿಗೆ ದೊರೆಯಬೇಕಿದೆ. ಇಷ್ಟೇ ಅಲ್ಲದೇ ಅನರ್ಹ ಶಾಸಕರ ವಿಚಾರಣೆ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.
ಸಂಪುಟವನ್ನು ರಚನೆ ಮಾಡುವ ಜವಾಬ್ದಾರಿಯನ್ನು ಬಿ ಎಸ್ ವೈ ಹೊತ್ತುಕೊಂಡಿದ್ದು, ಲಾಬಿ ಮಾಡುವವರಿಗೆ ಸ್ಥಾನ ನೀಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ಎಷ್ಟೇ ದಿನಗಳಾದರೂ ಕೂಡ ಕೇಂದ್ರದ ನಾಯಕರ ಅನುಮತಿ ಪಡೆದುಕೊಂಡು ಸಂಪುಟ ರಚನೆ ಮಾಡಲು ನಿರ್ಧರಿಸಿದ್ದಾರೆ. ಹಲವು ದಿನಗಳ ಕಾಲ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಸಂಪುಟ ಸೇರಲು ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಶಾಸಕರು, ಬಿಜೆಪಿಯ ಘಟಾನುಘಟಿಗಳ ದಂಡು ಸಜ್ಜಾಗಿರುವ ಬೆಳವಣಿಗೆ ನಡುವೆಯೇ ಪೌರತ್ವ ತಿದ್ದುಪಡಿ ಮಸೂದೆ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವರಿಷ್ಠರನ್ನು ಭೇಟಿ ಮಾಡಲು ಯಡಿಯೂರಪ್ಪ ಅವರಿಗೆ ಈ ವರೆಗೆ ಸಾಧ್ಯವಾಗಿಲ್ಲ.
ಉಪ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ ಖುಷಿಯಲ್ಲಿರುವ ಯಡಿಯೂರಪ್ಪ ಅವರು, ಸಚಿವ ಸಂಪುಟ ವಿಸ್ತರಣೆ ಮಾಡುವ ಭರವಸೆ ನೀಡಿದರಾದರೂ ಅದನ್ನು ಕಾರ್ಯಗತಕ್ಕೆ ತರುವುದು ವಿಳಂಬವಾಗುವ ಸಾಧ್ಯತೆಗಳಿವೆ. ಈ ನಡುವೆ ವಿದೇಶ ಪ್ರವಾಸ ಕೈಗೊಳ್ಳಲು ಮುಂದಾಗಿರುವುದರಿಂದ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯ ಜತೆಗೆ ಅಧಿವೇಶನವೂ ಮುಂದೂಡುವ ಸಾಧ್ಯತೆಗಳಿವೆ. ಹೀಗಾಗಿ, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಶಾಸಕರಿಗೆ ನಿರಾಸೆಯಾಗುವುದಂತೂ ಕಟ್ಟಿಟ್ಟ ಬುತ್ತಿಯಾಗಿದೆ.
ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾದ ನೂತನ ಶಾಸಕರಿಗೆ ಸಚಿವ ಸ್ಥಾನದ ಅಭಯವನ್ನು ಯಡಿಯೂರಪ್ಪ ನೀಡಿದ್ದಾರೆ. ಪಕ್ಷದ ಹಿರಿಯ ಶಾಸಕರು ಸಹ ಮಂತ್ರಿ ಸ್ಥಾನ ಪಡೆಯಲು ನಾನಾ ರೀತಿಯ ಕಸರತ್ತಿನಲ್ಲಿ ತೊಡಗಿದ್ದಾರೆ. ಹೊಸಬರ ಬದಲಿಗೆ ಹಳಬರನ್ನೇ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಆರ್ಎಸ್ಎಸ್ ಮುಖಂಡ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಯಡಿಯೂರಪ್ಪ ಅವರಿಗೆ ಈಗಾಗಲೇ ಸೂಚಿಸಿದ್ದಾರೆ. ಉಮೇಶ್ ಕತ್ತಿ, ರೇಣುಕಾಚಾರ್ಯ ಸೇರಿದಂತೆ ಹಲವರು ತಮಗೆ ಸಚಿವ ಸ್ಥಾನ ನೀಡಲೇಬೇಕೆಂದು ಬಿಗಿಪಟ್ಟುಹಿಡಿದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಹಾಗೂ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಪಡೆಯಲು ಕೇಂದ್ರದ ವರಿಷ್ಠರ ಭೇಟಿಗಾಗಿ ಈಗಾಗಲೇ ಯಡಿಯೂರಪ್ಪ ಎರಡು ಬಾರಿ ಸಮಯನಿಗದಿಪಡಿಸುವಂತೆ ಕೇಳಿದ್ದರು. ಆದರೆ ಇನ್ನೂ ಅನುಮತಿ ಸಿಕ್ಕಿಲ್ಲ.
ಫೆಬ್ರವರಿಯಲ್ಲಿ ಮಂಡನೆಯಾಗುವ ಬಜೆಟ್ ಸಿದ್ಧತೆ ಬಗ್ಗೆ ಯಡಿಯೂರಪ್ಪ ಮಗ್ನರಾಗಿದ್ದು, ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ಸಚಿವ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಆಕಾಂಕ್ಷಿಗಳಲ್ಲಿ ಅತೃಪ್ತಿ-ಅಸಮಾಧಾನ ಹೆಚ್ಚಾಗುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಂಪುಟ ವಿಸ್ತರಣೆಯ ಗೋಜಿಗೆ ಹೋಗದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಧನುರ್ಮಾಸ ಮುಗಿದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಚಾತಕಪಕ್ಷಿಯಂತೆ ಎದುರು ನೋಡುತ್ತಿದ್ದ ಸಚಿವಾಕಾಂಕ್ಷಿಗಳಿಗೆ ನಿರಾಸೆ ಕಾದಿರುವುದಂತೂ ಸುಳ್ಳಲ್ಲ. ಈ ಮುಂಚೆ ಜ. 20 ರಿಂದ 30ರವರೆಗೆ 10 ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು.
ಮುಖ್ಯಮಂತ್ರಿಗಳ ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ಅದನ್ನು ಜ. 27 ರಿಂದ 10 ದಿನಗಳ ಕಾಲ ನಡೆಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.