ಭೂ ಕಬಳಿಕೆ ಮತ್ತು ವಿಶೇಷ ನ್ಯಾಯಾಲಯಗಳ ವಿಚಾರಣೆ- ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಡಿ.30-ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ಮರುವಶಪಡಿಸಿಕೊಳ್ಳುವುದು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಬದಲಾಗಿ ರಾಜ್ಯಾದ್ಯಂತ ಇರುವ ಭೂ ಒತ್ತುವರಿ ಪ್ರಕರಣಗಳನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲೇ ವಿಚಾರಣೆ ನಡೆಸುವುದಾಗಿ ಅಧಿಸೂಚನೆ ಹೊರಡಿಸಿ ರಾಜ್ಯ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುದೀರ್ಘ ಪತ್ರ ಬರೆದಿರುವ ಎಚ್.ಕೆ.ಪಾಟೀಲ್ ಅವರು, ಭೂ ಕಬಳಿಕೆ ಮತ್ತು ವಿಶೇಷ ನ್ಯಾಯಾಲಯಗಳ ವಿಚಾರಣೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎ.ಟಿ.ರಾಮಸ್ವಾಮಿ ಅವರ ವರದಿ ಪ್ರಕಾರ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ 1320 ಸರ್ವೆ ನಂಬರ್‍ಗಳಲ್ಲಿ 31,998 ಎಕರೆ ಭೂಮಿ ಒತ್ತುವರಿಯಾಗಿದ್ದು, 1176 ಮಂದಿ ಆರೋಪಿಗಳಿದ್ದಾರೆ. ಬೆಂಗಳೂರು ಪೂರ್ವ ತಾಲೂಕಿನಲ್ಲಿ 1187 ಸರ್ವೆ ನಂಬರ್‍ಗಳಲ್ಲಿ 16,718 ಎಕರೆ ಒತ್ತುವರಿಯಾಗಿದ್ದು, ಒಂದು ಸಾವಿರ ಮಂದಿ ಮೇಲೆ ಆರೋಪಗಳಿವೆ. ಬೆಂಗಳೂರು ಉತ್ತರ ತಾಲೂಕಿನಲ್ಲಿ 870 ಸರ್ವೆ ನಂಬರ್‍ಗಳಲ್ಲಿ 11,577 ಎಕರೆ ಒತ್ತುವರಿಯಾಗಿ, 1885 ಮಂದಿ ಮೇಲೆ ಆರೋಪವಿದೆ.

ಬೆಂಗಳೂರು ಉತ್ತರ ಹೆಚ್ಚುವರಿ ತಾಲೂಕಿನಲ್ಲಿ 1197 ಸರ್ವೆ ನಂಬರ್‍ಗಳಲ್ಲಿ 26,026 ಎಕರೆ ಭೂಮಿಯನ್ನು 3,830 ಮಂದಿ ಒತ್ತುವರಿ ಮಾಡಿದ್ದಾರೆ. ಆನೇಕಲ್ ತಾಲೂಕಿನ 2,147 ಸರ್ವೆ ನಂಬರ್‍ಗಳಲ್ಲಿ 32,348 ಎಕರೆ ಭೂಮಿಯನ್ನು 1403 ಮಂದಿ ಒತ್ತುವರಿ ಮಾಡಿದ್ದಾರೆ. ಒಟ್ಟು 1,18,668 ಎಕರೆ ಭೂಮಿಯನ್ನು 9,294 ಮಂದಿ ಒತ್ತುವರಿ ಮಾಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಆದರೆ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ 28, ಬೆಂಗಳೂರು ಉತ್ತರ ತಾಲೂಕಿನ 99 ಪ್ರಕರಣಗಳು ಒಳಗೊಂಡು 127 ಪ್ರಕರಣಗಳು ಮಾತ್ರ ಈವರೆಗೆ ದಾಖಲಾಗಿವೆ. ಬೆಂಗಳೂರು ಪೂರ್ವ, ಉತ್ತರ ಹೆಚ್ಚುವರಿ, ಆನೇಕಲ್ ತಾಲೂಕುಗಳಲ್ಲಿ ಒಂದೂ ಪ್ರಕರಣಗಳು ದಾಖಲಾಗಿಲ್ಲ ಎಂದು ಎಚ್.ಕೆ.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಜಂಟಿ ಸದನ ಸಮಿತಿ ಎರಡು ಭಾಗಗಳಿಗೆ ತನ್ನ ವರದಿ ನೀಡಿ 30 ಸಾವಿರ ಎಕರೆ ಭೂ ಪ್ರದೇಶ ಒತ್ತುವರಿಯಾಗಿದೆ. 33, 812 ಮಂದಿ ಜನ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ.

ಬೆಂಗಳೂರಿನಲ್ಲಿ ಭೂಮಿಗೆ ಚಿನ್ನದ ಮೌಲ್ಯವಿದೆ. ವಿವಿಧ ಇಲಾಖೆಯ ಸ್ಥಳೀಯ ಸಂಸ್ಥೆಗಳ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದಿಮೆದಾರರು, ಬಿಲ್ಡರ್‍ಗಳು, ಬ್ರೋಕರ್‍ಗಳು ಕಬಳಿಸಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಈ ಭೂಮಿಯನ್ನು ಮರುವಶಪಡಿಸಿಕೊಳ್ಳುವುದು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿತ್ತು. ಇದಕ್ಕಾಗಿ 2015ರಲ್ಲಿ ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯ ಕೂಡ ಸ್ಥಾಪನೆಯಾಗಿದೆ. ಆದರೆ ನ್ಯಾಯಾಲಯಕ್ಕೆ ಸರಿಯಾದ ಪ್ರಕರಣಗಳನ್ನು ಸರ್ಕಾರ ಒದಗಿಸುತ್ತಿಲ್ಲ ಎಂದು ದೂರಿದರು.

ಬೆಂಗಳೂರಿನಲ್ಲಿ ಪ್ರಭಾವಿ ಬಿಲ್ಡರ್‍ಗಳನ್ನು ರಕ್ಷಣೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ರಾಜ್ಯಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ವರ್ಗಾವಣೆ ಮಾಡಿ ನ್ಯಾಯದಾನವನ್ನು ವಿಳಂಬ ಮಾಡುವ ಪ್ರಯತ್ನ ನಡೆದಿದೆ. ಹಲವಾರು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಕೃಷಿ ಮಾಡಿರುವವರ ವಿರುದ್ಧವೂ ಭೂಕಬಳಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಅಂತಹ ಪ್ರಕರಣಗಳನ್ನು ಬೆಂಗಳೂರಿಗೆ ವರ್ಗಾಯಿಸಿದ್ದು, ಕೆಳ ಸಮುದಾಯದ ದೂರದ ಊರಿನ ಜನರಿಗೆ ಬೆಂಗಳೂರಿಗೆ ಬಂದು ಪ್ರಕರಣ ಎದುರಿಸುವುದು ಕಷ್ಟಸಾಧ್ಯವಾಗಲಿದ್ದು, ಅನಗತ್ಯ ಕಿರುಕುಳವಾಗುತ್ತದೆ.

ರಾಜ್ಯ ಸರ್ಕಾರ ಆಯಾ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯ ತೆರೆದು ಭೂ ಕಬಳಿಕೆ ವಿರುದ್ಧ ವಿಚಾರಣೆ ಮಾಡಲಿ. ಅದನ್ನು ಬಿಟ್ಟು ಬೆಂಗಳೂರಿಗೆ ಪ್ರಕರಣ ವರ್ಗಾಯಿಸುವುದು ಸರಿಯಲ್ಲ. ಇಲ್ಲಿನ ಪ್ರಭಾವಿಗಳನ್ನು ರಕ್ಷಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ