ಪುರಿ, ಏ.4-ಒಡಿಶಾದ ಪುರಿಯಲ್ಲಿರುವ ವಿಶ್ವವಿಖ್ಯಾತ ಜಗನ್ನಾಥ ದೇವಾಲಯದ 12ನೇ ಶತಮಾನದ ರತ್ನ ಭಂಡಾರವನ್ನು ಇಂದು 34 ವರ್ಷಗಳ ಬಳಿಕ ಸಮಿತಿಯ ಸದಸ್ಯರು ಪರಿಶೀಲಿಸಿದರು. ಈ ಭಂಡಾರದ ವಿನ್ಯಾಸ ಸ್ಥಿರತೆ ಮತ್ತು ಅದರ ಸುರಕ್ಷತೆಯನ್ನು ಪರಿಶೀಲಿಸಲು ಮೂರುವರೆ ದಶಕಗಳ ಬಳಿಕ ಈ ತಪಾಸಣೆ ನಡೆದಿರುವುದು ವಿಶೇಷವಾಗಿದೆ. 10 ಸದಸ್ಯರ ತಂಸವು ರತ್ನಭಂಡಾರದ ನೆಲ, ಮೇಲ್ಛಾವಣಿ ಮತ್ತು ಗೋಡೆಗಳ ಭೌತಿಕ ಸ್ಥಿತಿ-ಗತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಲಿದ್ದಾರೆ ಎಂದು ಶ್ರೀ ಜಗನ್ನಾಥ ದೇವಾಲಯದ ಮುಖ್ಯ ಆಡಳಿತಾಧಿಕಾರಿ ಪಿ.ಕೆ. ಜೀನಾ ಹೇಳಿದ್ದಾರೆ.
ಈ ತಂಡದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್ಐ) ಸಂಸ್ಥೆ ಇಬ್ಬರು ಪರಿಣಿತರೂ ಇದ್ದಾರೆ. ಪುರಿಯ ದೊರೆ ಗಜಪತಿ ಮಹಾರಾಜ ದಿವ್ಯಸಿಂಗ್ ದೇವ್, ಅವರ ಪ್ರತಿನಿಧಿಗಳು ಮತ್ತು ರಾಜವಂಶಸ್ಥ ಪಟ್ಟಾಜೋಷಿ ಮಹಾಪಾತ್ರ ಅವರನ್ನೂ ತಂಡ ಒಳಗೊಂಡಿದೆ. ಇಬ್ಬರು ಎಂಜಿನಿಯರ್ಗಳು, ಸಮಿತಿ ಸದಸ್ಯರು ಮತ್ತು ವಕೀಲರೂ ಸಹ ಇದರಲ್ಲಿದ್ದು, ಪರಿಶೀಲನೆ ನಡೆಸಿದ್ದಾರೆ. ರತ್ನ ಭಂಡಾರದಲ್ಲಿ ಅಮೂಲ್ಯ ರತ್ನ, ವಜ್ರ-ವೈಢೂರ್ಯಗಳು, ಮುತ್ತು, ಹವಳ, ಪಚ್ಚೆ, ಚಿನ್ನ-ಬೆಳ್ಳಿ ಆಭರಣಗಳಿದ್ದು, ಅವುಗಳನ್ನು ಮುಟ್ಟಲು ತಂಡಕ್ಕೆ ಅವಕಾಶ ನೀಡಿಲ್ಲ. ಇವುಗಳ ಭದ್ರತೆಗಾಗಿ ಈ ಕೊಠಡಿ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಎಂಬುದನ್ನು ಮಾತ್ರ ಪರಿಶೀಲಿಸಲು ಅವಕಾಶ ನೀಡಲಾಗಿದೆ. 1984ರಲ್ಲಿ ರತ್ನ ಭಂಡಾರವನ್ನು ಏಳು ಸದಸ್ಯರ ತಂಡವೊಂದು ಪರಿಶೀಲಿಸಿತ್ತು.