ಬ್ಯಾಂಕುಗಳು ಒಟ್ಟು 2.41 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ: ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ

ನವದೆಹಲಿ, ಏ.4- ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕ ವಲಯದ (ಪಿಎಸ್‍ಯು) ಬ್ಯಾಂಕುಗಳು ಒಟ್ಟು 2.41 ಲಕ್ಷ ಕೋಟಿ ರೂ.ಗಳ ಸಾಲ ಮನ್ನಾ ಮಾಡಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಅವರು, ಏಪ್ರಿಲ್ 2014 ಮತ್ತು ಸೆಪ್ಟೆಂಬರ್ 2017ರ ನಡುವೆ ಮೂರು ವರ್ಷಗಳ ಅವಧಿಯಲ್ಲಿ 2.41 ಕೋಟಿ ರೂ.ಗಳ ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು. ತನ್ನ ಆರ್ಥಿಕ ಸ್ಥಿತಿ ವಿವರವನ್ನು ನೀಡಲು ಹಾಗೂ ತೆರಿಗೆ ಪಾವತಿ ಕ್ಷಮತೆ ಸಾಧಿಸಲು ನಿರ್ದಿಷ್ಟ ಪ್ರಕರಣಗಳಲ್ಲಿ ಮರುಪಾವತಿಯಾಗದಿರುವ ಸಾಲಗಳನ್ನು ಮನ್ನಾ ಮಾಡುವುದು ಬ್ಯಾಂಕ್‍ಗಳ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಚಿವರ ಈ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ರೈತರು ಸಾಲ ಮನ್ನಾ ಮಾಡಲು ಆಗ್ರಹಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಸಾಲಗಳನ್ನು ಮನ್ನಾ ಮಾಡುವ ಬದಲು ಬ್ಯಾಂಕ್‍ಗಳು ಸುಸ್ತಿದಾರರ ಸಾಲಗಳನ್ನು ಮನ್ನಾ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಫೇಸ್‍ಬುಕ್‍ನಲ್ಲಿ ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ