ಚಿಕ್ಕಮಗಳೂರು: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಇನ್ನಷ್ಟು ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಹಲವು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವ ಆಶಯ ಹೊಂದಿದ್ದಾರೆ. ಚುನಾವಣೆಗೆ ಮುನ್ನ ಮತ್ತು ನಂತರ ಹಲವು ಶಾಸಕರು ಬಿಜೆಪಿಗೆ ಬರುತ್ತಾರೆ. ಕಾಂಗ್ರೆಸ್ ಪಕ್ಷ ವಿಭಜನೆಯಾಗಲಿದೆ. ಯಾವುದನ್ನೂ ಕದ್ದು ಮುಚ್ಚಿ ಮಾಡಲು ಸಾಧ್ಯವಿಲ್ಲ. ಎಷ್ಟು ಮಂದಿ ಬಿಜೆಪಿಗೆ ಬರಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಸಿ.ಟಿ. ರವಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಧಿಕಾರ ಅಥವಾ ವ್ಯಾವಹಾರಿಕ ದೃಷ್ಟಿಯಿಂದಲ್ಲ, ವೈಚಾರಿಕ ಹಿನ್ನೆಲೆಯಲ್ಲಿ ಈ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಿದ್ದಾರೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ:
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗೆದ್ದು ಬಿಜೆಪಿ ಸರ್ಕಾರ ಪತನಗೊಳ್ಳುತ್ತದೆ ಎಂದು ಹೇಳಿದ್ದ ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಭವಿಷ್ಯ ಎಷ್ಟು ಬಾರಿ ಸತ್ಯ ಆಗಿದೆ? ಮಕಾಡೆ ಬಿದ್ರೂ ಮೀಸೆ ಮಣ್ಣಾಗಲಿಲ್ ಎಂಬ ಗಾದೆ ಸಿದ್ದರಾಮಯ್ಯಗೆ ಅನ್ವಯವಾಗುತ್ತದೆ. ಮೋದಿ ಅಪ್ಪನಾಣೆಗೂ ಪ್ರಧಾನಿಯಾಗಲ್ಲ ಅಂದ್ರು. ಅವರಪ್ಪನನ್ನೂ ತಂದರು. 2019ರ ಚುನಾವಣೆಯಲ್ಲಿ ಬಿಜೆಪಿಯನ್ನ ಸಿಂಗಲ್ ನಂಬರ್ಗೆ ಇಳಿಸುತ್ತೇವೆ ಎಂದು ಹೇಳಿದ್ರು. ಎದೆ ತಟ್ಟಿಕೊಂಡು ನಾನೇ ಮುಖ್ಯಮಂತ್ರಿ ಅಂತಿದ್ರು. ಏನಾಯ್ತು? ಬಯಸು ಸೀಮೆ ನಾಟಕದಲ್ಲಿ ಅಬ್ಬರಿಸುವಂತಷ್ಟೇ ಅವರದ್ದು. ನಾಟಕ ಮಾಡಿದವರೆಲ್ಲ ನಿಜ ಜೀವನದಲ್ಲಿ ಅದೇ ತರಹ ಇರುತ್ತಾರೆ ಅಂತಲ್ಲ. ನಾನೇ ಸಿಎಂ ಎಂದು ಎದೆ ತಟ್ಟಿಕೊಂಡವರು ಚಾಮುಂಡೇಶ್ವರಿಯಲ್ಲಿ ಸೋಲಬೇಕಾಯಿತು. ಅಪ್ಪನಾಣೆ ಮೋದಿ ಪ್ರಧಾನಿಯಾಗಲ್ಲ ಅಂದವರು ತಮ್ಮ ಕಣ್ಮುಂದೆಯೇ ಅವರು ಎರಡೆರಡು ಬಾರಿ ಪ್ರಧಾನಿಯಾಗಿದ್ದನ್ನು ನೋಡಬೇಕಾಯಿತು ಎಂದು ಸಿಟಿ ರವಿ ವ್ಯಂಗ್ಯ ಮಾಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ತೀರ್ಮಾನ ಮಾಡುವುದು ನಾನಾಗಲೀ, ಸಿದ್ದರಾಮಯ್ಯ ಆಗಲಿ ಅಲ್ಲ. ಜನರು ತೀರ್ಮಾನ ಮಾಡುತ್ತಾರೆ. ಇವರ ಕೈಯಲ್ಲಿ ಅಧಿಕಾರ ಇದ್ದಿದ್ರೆ ಅಪ್ಪನ ಆಸ್ತಿ ಮಗನಿಗೆ ಬರೆದಂತೆ, ನನ್ನ ಬಳಿಕ ನನ್ನ ಮಗನೇ ಮುಖ್ಯಮಂತ್ರಿ ಎಂದು ಬರೆದಿಡುತ್ತಿದ್ದರು ಎಂದು ಸಿದ್ದರಾಮಯ್ಯ ಬಗ್ಗೆ ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.