ಬೆಂಗಳೂರು, ನ.7- ಜೆಡಿಎಸ್‍ನ ವಿಧಾನಪರಿಷತ್ ಸದಸ್ಯರೊಂದಿಗೆ ಭಾನುವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಭೆ ನಡೆಸುವ ಸಾಧ್ಯತೆಗಳಿವೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಕುಮಾರಸ್ವಾಮಿ ಅವರು ನಾಳೆ ರಾತ್ರಿ ಬೆಂಗಳೂರಿಗೆ ಮರಳಲಿದ್ದು, ಬೆಂಗಳೂರಿಗೆ ಬಂದ ನಂತರ ಅಸಮಾಧಾನಗೊಂಡಿರುವ ವಿಧಾನಪರಿಷತ್ ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಮಾಜಿ ಸಚಿವ ಬಸವರಾಜ ಹೊರಟ್ಟಿ ಸೇರಿದಂತೆ ಕೆಲವು ಜೆಡಿಎಸ್‍ನ ವಿಧಾನಪರಿಷತ್ ಸದಸ್ಯರು ಸಭೆ ಸೇರಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದ್ದರು.ಅದರ ಬೆನ್ನಲ್ಲೇ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಪರಿಷತ್ ಸದಸ್ಯರ ಸಭೆ ನಡೆಸಿ ಸಮಾಧಾನಪಡಿಸಿದ್ದರು.
ಮೈತ್ರಿ ಸರ್ಕಾರದ ಅವಧಿಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಒಟ್ಟಾಗಿ ಪಕ್ಷ ಸಂಘಟನೆ ಮಾಡಿ ಮುಂಬರುವ ಚುನಾವಣೆಗಳನ್ನು ಎದಿರಿಸೋಣ ಎಂಬ ಕಿವಿಮಾತನ್ನು ಗೌಡರು ಹೇಳಿದ್ದರು.
ಅಲ್ಲದೆ, ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳೊಣ ಎಂದು ಸಲಹೆ ನೀಡದ್ದರು.ಅಷ್ಟರಲ್ಲಿ ಲಂಡನ್ ಪ್ರವಾಸ ಕೈಗೊಂಡಿದ್ದರಿಂದ ವಿಧಾನಪರಿಷತ್ ಸದಸ್ಯರೊಂದಿಗಿನ ಸಭೆ ಮುಂದೂಡಲಾಗಿತ್ತು.
ಲಂಡನ್‍ನಿಂದ ಕುಮಾರಸ್ವಾಮಿ ಅವರು ವಾಪಸ್ ಆದ ಬಳಿಕ ಅಸಮಾಧಾನಗೊಂಡಿರುವ ವಿಧಾನಪರಿಷತ್ ಸದಸ್ಯರ ಜತೆ ಮಾತುಕತೆ ನಡೆಸಲಿದ್ದು, ಬಹುತೇಕ ಶನಿವಾರ ಇಲ್ಲವೇ ಭಾನುವಾರ ಸಭೆ ನಡೆಯುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.