ಸ್ಪಾಟ್ ಫಿಕ್ಸಿಂಗ್ ಪ್ರಕರಣ-ಬಂಧಿತರಾಗಿರುವ ಆಟಗಾರರನ್ನು ಬಿಡುವಂತೆ ಪೋಲೀಸರ ಮೇಲೆ ಭಾರೀ ಒತ್ತಡ

ಬೆಂಗಳೂರು, ನ.7-  ಕೆಪಿಎಲ್ ಫೈನಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ಕೈಗೆತ್ತಿಕೊಂಡ ಬಳಿಕ ಬಂಧಿತರಾಗಿರುವ ಆಟಗಾರರನ್ನು ಬಿಡುವಂತೆ ಪೋಲೀಸರ ಮೇಲೆ ಭಾರೀ ಒತ್ತಡ ಬರುತ್ತಿದ್ದು, ಯಾವುದೇ ಒತ್ತಡಕ್ಕೆ ಮಣಿಯದೆ ಪೋಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ನಗರ ಪೋಲೀಸ್ ಆಯುಕ್ತ ಭಾಸ್ಕರ್‍ರಾವ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆಟಗಾರರನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ. ಆಟಗಾರರ ಭವಿಷ್ಯದ ದೃಷ್ಟಿಯಿಂದ ಅವರನ್ನು ಬಿಡಿ ಎಂದು ಪೋಲೀಸರ ಮೇಲೆ ಸಾಕಷ್ಟು ಒತ್ತಡ ಬರುತ್ತಿದೆ. ಆದರೆ, ಪೋಲೀಸರು ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ ಎಂದರು.

ಈ ಪ್ರಕರಣದಲ್ಲಿ ಇನ್ನೂ ಹಲವು ಆಟಗಾರರು, ಬುಕ್ಕಿಗಳು, ಬ್ರೋಕರ್‍ಗಳು ಸಿಕ್ಕಿಬೀಳುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

ಕ್ರಿಕೆಟ್ ಅಭಿಮಾನಿಗಳು ದುಡ್ಡು ಕೊಟ್ಟು ಟಿಕೆಟ್ ಪಡೆದು ಬಹಳ ಉತ್ಸಾಹದಿಂದ ಕ್ರಿಕೆಟ್ ವೀಕ್ಷಿಸಲು ಬರುತ್ತಾರೆ. ಆದರೆ, ಕ್ರಿಕೆಟ್ ಆಟಗಾರರು ಮ್ಯಾಚ್ ಫಿಕ್ಸಿಂಗ್ ಭೂತಕ್ಕೆ ಒಳಗಾಗಿ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಬಾರದು ಎಂದು ಭಾಸ್ಕರ್‍ರಾವ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ