ಮುಂಬೈ: ಮಹಾರಾಷ್ಟ್ರದ ಹಾಲಿ ವಿಧಾನಸಭೆ ಅವಧಿ ಮುಕ್ತಾಯಗೊಂಡು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ಇನ್ನೊಂದೇ ದಿನ ಬಾಕಿ ಇದೆ. ಈ ವರೆಗೂ ಹೊಸ ಸರ್ಕಾರ ರಚನೆ ಕಗ್ಗಂಟಾಗಿಯೆ ಉಳಿದಿದೆ. ಈ ನಡುವೆ ಎನ್ ಸಿಪಿ ಜೊತೆಗೂಡಿ ಶಿವಸೇನೆ ಸರ್ಕಾರ ರಚನೆ ಮಾಡಲಿದೆಯೇ ಎಂಬ ಪ್ರಶ್ನೆ ಮೂಡಿಸಿದೆ ಶರದ್ ಪವಾರ್-ಶಿವಸೇನೆ ನಾಯಕ ಸಂಜಯ್ ರಾವುತ್ ಭೇಟಿ!
ನ.6 ರಂದು ಶಿವಸೇನೆಯ ನಾಯಕ ಸಂಜಯ್ ರಾವುತ್ ಹಾಗೂ ಎನ್ ಸಿಪಿ ನಾಯಕ ಶರದ್ ಪವಾರ್ ಭೇಟಿ ಮಾಡಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ಎನ್ ಸಿಪಿ ನಾಯಕರನ್ನು ಭೇಟಿ ಮಾಡಿರುವುದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವುತ್, ಇದೊಂದು ಸೌಜನ್ಯದ ಭೇಟಿಯಷ್ಟೇ ಎಂದು ಹೇಳಿದ್ದಾರೆ.
ಶಿವಸೇನೆ ಸರ್ಕಾರ ರಚನೆ ಮಾಡುವುದರ ಬಗ್ಗೆ ಚುನಾವಣಾ ಫಲಿತಾಂಶ ಪ್ರಕಟವಾದ ದಿನದಿಂದಲೂ ಸಂಜಯ್ ರಾವುತ್ ಉತ್ಸಾಹದ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರ ರಚನೆಯಾಗಿದ್ದೇ ಆದಲ್ಲಿ ಅಧಿಕಾರ ಸಮನಾಗಿ ಹಂಚಿಕೆಯಾಗಬೇಕು ಎಂದು ಶಿವಸೇನೆ ಪಟ್ಟು ಹಿಡಿದಿರುವುದರಿಂದ ಸರ್ಕಾರ ರಚನೆ ಕಗ್ಗಂಟಾಗಿ ಉಳಿದಿದೆ