ಶಿವಸೇನೆ ಜೊತೆ ಮೈತ್ರಿಯ ಪ್ರಶ್ನೆಯೇ ಇಲ್ಲ, ಜವಾಬ್ದಾರಿಯುತ ಪ್ರತಿಪಕ್ಷ ಸ್ಥಾನದಲ್ಲಿ ಕೂರುತ್ತೇವೆ: ಶರದ್ ಪವಾರ್ 

ಮುಂಬೈ: ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ,ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ನಮ್ಮ ಜವಾಬ್ದಾರಿಯ ಕೆಲಸಗಳನ್ನು ಮಾಡುತ್ತೇವೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ)ಯ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಬಿಜೆಪಿ-ಶಿವಸೇನೆ ಪರವಾಗಿ ರಾಜ್ಯದ ಜನತೆ ತೀರ್ಪು ಕೊಟ್ಟಿದ್ದು ಅವರು ಸರ್ಕಾರ ರಚನೆ ಮಾಡಬೇಕು ಎಂದು ಮುಂಬೈಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನನಗೆ ಇಲ್ಲಿ ಏನೂ ಹೇಳಲು ಇಲ್ಲ. ಬಿಜೆಪಿ-ಶಿವಸೇನೆ ಮೈತ್ರಿ ಪರವಾಗಿ ಜನರ ತೀರ್ಪು ಸಿಕ್ಕಿದೆ, ಶಿವಸೇನೆ-ಎನ್ ಸಿಪಿ ಸರ್ಕಾರ ರಚನೆಯ ಪ್ರಶ್ನೆ ಹೇಗೆ ಇಲ್ಲಿ ಉದ್ಭವಿಸುತ್ತದೆ. ಕಳೆದ 25 ವರ್ಷಗಳಿಂದ ಅವರು ಜೊತೆಯಾಗಿ ಇದ್ದಾರೆ. ಇಂದು ಅಥವಾ ನಾಳೆ ಅವರು ಒಂದಾಗುತ್ತಾರೆ. ಹೀಗಾಗಿ ಅವರೇ ಸಾಧ್ಯವಾದಷ್ಟು ಬೇಗನೆ ಸರ್ಕಾರ ರಚನೆ ಮಾಡಬೇಕು. ಜವಾಬ್ದಾರಿಯುತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದು ನಮ್ಮ ಕೆಲಸ ಎಂದರು.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಯನ್ನು ತಪ್ಪಿಸಲು ಈಗ ಉಳಿದಿರುವುದು ಒಂದೇ ಮಾರ್ಗ ಅದು ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚನೆಯಷ್ಟೆ ಎಂದು ಕೂಡ ಹೇಳಿದರು.

ಇಂದು ಬೆಳಗ್ಗೆ ಶಿವಸೇನೆ ನಾಯಕ ಸಂಜಯ್ ರಾವತ್ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ಸಂಜಯ್ ರಾವತ್ ಇಂದು ಬೆಳಗ್ಗೆ ನನ್ನನ್ನು ಭೇಟಿ ಮಾಡಿ ಮುಂಬರುವ ಸಂಸತ್ ಅಧಿವೇಶನ ಬಗ್ಗೆ ಚರ್ಚೆ ನಡೆಸಿದರು. ನಮ್ಮ ಸಮಾನ ನಿಲುವಿನ ಕೆಲವು ವಿಚಾರಗಳನ್ನು ಸಹ ನಾವು ಚರ್ಚೆ ನಡೆಸಿದೆವು ಎಂದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ