ಬೆಂಗಳೂರು, ಅ.25-ನಮ್ಮ ಸಹವಾಸ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೇಡಿದ್ದು ಯಾರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ನೀವು ಕೊಟ್ಟ ಸಹಕಾರ ಎಂಥದ್ದು?ಮೈತ್ರಿ ಸರ್ಕಾರ ಬೀಳಿಸಿದ ಶಾಸಕರ ಎದೆ ಬಗೆದರೆ ಅಲ್ಲಿ ಕಾಣುತ್ತಿದ್ದವರು ಯಾರು?ಎಂದು ಪ್ರಶ್ನಿಸಿದ್ದಾರೆ.
ಈ ಯಾರು ಎಂಬ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸುವಿರಾ? ಎಂದು ಪ್ರಶ್ನೆಗಳ ಸುರಿಮಳೆ ಗೈದಿರುವ ಕುಮಾರಸ್ವಾಮಿ, ನೀವು ಕೊಟ್ಟ ಸಹಕಾರಕ್ಕೆ, ಬೆಂಬಲಕ್ಕೆ ನಾನು ಋಣಿ. ಈ ಜನ್ಮದಲ್ಲಿ ನಾನು ಮರೆಯಲಾರೆ.ನಿಮ್ಮ ಸಹವಾಸ ನಮಗೂ ಬೇಡ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಮನೆ ಬಾಗಿಲಿಗೆ ಹೋಗಿದ್ದು, ಸಹಕಾರ ಕೊಟ್ಟವರು ಯಾರು?ಪ್ರಕೃತಿ ಚಿಕಿತ್ಸೆಯಲ್ಲಿ ಕೂತು ಕತ್ತಿ ಮಸೆದಿದ್ದು ಯಾರು?ದಿನಕ್ಕೊಬ್ಬರ ಮೂಲಕ ನನ್ನನ್ನು ಟೀಕಿಸಿದ್ದು ಯಾರು?ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆದ್ದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕು. ನಂತರ ನೇರವಾಗಿ ಚುನಾವಣೆಗೆ ಹೋಗುತ್ತೇವೆ. ಜೆಡಿಎಸ್ ಜೊತೆ ಸೇರಲ್ಲ. ಜೆಡಿಎಸ್ ಜೊತೆ ಸೇರಿ ಅನುಭವಿಸಿದ್ದು ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಯಾರ ಸಹವಾಸದಿಂದ ಯಾರು ಕೆಟ್ಟರು, ಯಾರು ಯಾರಿಗೆ ಕೇಡು ಬಗೆದರು ಎಂದು ಆತ್ಮವಂಚನೆಯಿಲ್ಲದೆ ಹೇಳುವಿರಾ ಎಂದು ಟೀಕಾಪ್ರಹಾರವನ್ನು ಕುಮಾರಸ್ವಾಮಿ ಮಾಡಿದ್ದಾರೆ.