ಬೆಂಗಳೂರು, ಅ.19-ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡಲು ಶಿಫಾರಸು ಮಾಡಿರುವ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಕುರಿತು ಟೀಕೆ-ಟಿಪ್ಪಣಿಗಳು ಹೆಚ್ಚಾಗಿದ್ದು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಸಚಿವರಾದ ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ ನಡುವೆ ಟ್ವೀಟ್ ವಾರ್ ನಡೆದಿದೆ.
ಈಶ್ವರಪ್ಪ ಅವರು ಟ್ವೀಟ್ ಮಾಡಿ, ನಾವಾಗಿದ್ದಕ್ಕೆ ವೀರ ಸಾವರ್ಕರ್ ಅವರಿಗೆ ಭಾರತರತ್ನ ನೀಡಲು ಶಿಫಾರಸ್ಸು ಮಾಡುತ್ತಿದ್ದೇವೆ. ಸನ್ಮಾನ್ಯ ಸಿದ್ದರಾಮಯ್ಯ ಅವರೇ ನೀವಾಗಿದ್ದರೆ ಮಹಮ್ಮದ್ ಆಲಿ ಜಿನ್ನಾಗೆ ಕೊಡಿಸಲು ಶಿಫಾರಸು ಮಾಡುತ್ತಿದ್ದೀರೇನೋ ಅಲ್ವಾ?ಎಂದು ಪ್ರಶ್ನಿಸಿದ್ದಾರೆ.
ಈಶ್ವರಪ್ಪ ಅವರ ಟ್ವೀಟ್ಗೆ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆದರೆ ಇನ್ನೊಬ್ಬ ಸಚಿವ ಸಿ.ಟಿ.ರವಿ ಅವರ ಟ್ವೀಟ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಸಿ.ಟಿ.ರವಿ ಅವರು ಸಿದ್ದರಾಮಯ್ಯ ಕುರಿತು ಟ್ವೀಟ್ ಮಾಡಿ, ರಾಷ್ಟ್ರಭಕ್ತ ವೀರ ಸಾವರ್ಕರ್ ಅವರನ್ನು ಮಹಾತ್ಮಗಾಂಧಿ ಹತ್ಯೆಯ ಸಂಚುಗಾರ ಎಂದು ಟೀಕಿಸುತ್ತಿದ್ದೀರಾ.ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ನಿಮಗೆ ಮಾನಸಿಕ ವೈಫಲ್ಯ ಕಾಡಲಾರಂಭಿಸಿದೆ. ನಿಮಗೆ ಇತಿಹಾಸದ ನಿಮಗೇನಾದರೂ ಗೊತ್ತೇ? ಎಂದು ಪ್ರಶ್ನಿಸಿದ್ದಾರೆ.
ನೀವೊಮ್ಮೆ ಸೆಲ್ಯೂಲಾರ್ ಜೈಲ್ಗೆ ಏಕೆ ಭೇಟಿ ನೀಡಬಾರದು, ಬೇಕಿದ್ದರೆ ನಿಮ್ಮ ಪ್ರವಾಸದ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಸಿದ್ದರಾಮಯ್ಯ ಅವರನ್ನು ಕೆಣಕಿದ್ದಾರೆ.
ಇದಕ್ಕೆ ಅಷ್ಟೇ ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ ಎಂದು ಹಿಂದೆ ಸಿ.ಟಿ.ರವಿ ಅವರ ಕಾರು ಅಪಘಾತವಾದ ಪ್ರಕರಣವನ್ನು ನೆನಪಿಸಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
ನಮ್ಮಂತಹವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ ಸತ್ಯ ತಿಳಿದುಕೊಂಡು ಮಾತನಾಡುತ್ತೇವೆ ಎಂದು ಹೇಳಿರುವ ಸಿದ್ದರಾಮಯ್ಯ, ರಾಷ್ಟ್ರಪಿತ ಮಹಾತ್ಮಗಾಂಧಿ ಹತ್ಯೆಯ ಆರೋಪಿಗಳಿಗೆ ಭಾರತರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರನ್ನು ಸಾಯಿಸಿದವರಿಗೆ ಕನಿಷ್ಠ ಮೂರು ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪ.. ಎಂದು ಟಾಂಗ್ ನೀಡಿದ್ದಾರೆ.