ಮಹದಾಯಿ ವಿಷಯ-ಯಾವ ರಾಜಕೀಯ ಪಕ್ಷಗಳಿಂದಲೂ ನ್ಯಾಯ ದೊರೆತಿಲ್ಲ-ರೈತ ಸೇನಾ ಅಧ್ಯಕ್ಷ ವೀರೇಶ್ ಸೊರಬದ ಮಠ

ಬೆಂಗಳೂರು, ಅ.19- ಮಹದಾಯಿ ವಿಷಯದಲ್ಲಿ ಯಾವ ರಾಜಕೀಯ ಪಕ್ಷಗಳಿಂದಲೂ ನ್ಯಾಯ ದೊರೆತಿಲ್ಲ. ಎಲ್ಲರೂ ನಾಟಕ ಮಾಡುತ್ತಿದ್ದಾರೆ ಎಂದು ಕರ್ನಾಟಕ ರೈತ ಸೇನಾ ಅಧ್ಯಕ್ಷ ವೀರೇಶ್ ಸೊರಬದ ಮಠ ಆಕ್ರೋಶ ವ್ಯಕ್ತಪಡಿಸಿದರು.

ಮೂರು ದಿನಗಳಿಂದ ಕಳಸಾ ಬಂಡೂರಿ ಯೋಜನೆ ಅಧಿಸೂಚನೆಗಾಗಿ ನಡೆಸುತ್ತಿರುವ ಹೋರಾಟವನ್ನು ಕೈ ಬಿಡುತ್ತಿದ್ದೇವೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದ್ದಕ್ಕಾಗಿ ನಾವು ಹೋರಾಟದಿಂದ ಹಿಂದೆ ಸರಿಯುತ್ತಿಲ್ಲ. ಅವರನ್ನು ನಾವು ಇಲ್ಲಿಗೆ ಕರೆದಿರಲಿಲ್ಲ. ಅವರಾಗೇ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದರು.

ಯೋಜನೆ ಅಧಿಸೂಚನೆಗೆ ಒತ್ತಾಯಿಸಿ ರಾಜ್ಯಪಾಲರ ಭೇಟಿಗೆ ಆಗ್ರಹಿಸಿದ್ದೆವು.ಆದರೆ, ಅದು ಕೈಗೂಡಲಿಲ್ಲ. ಈಗ ನಾವು ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಐದು ಜಿಲ್ಲೆಗಳ 13 ತಾಲ್ಲೂಕುಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಉತ್ತರ  ಕರ್ನಾಟಕದ ನರಗುಂದದಲ್ಲಿ ಪ್ರತಿಭಟನೆ ನಡೆಸಿದರೆ ಅಲ್ಲಿನ ಸಂಸದರು, ಶಾಸಕರು ಹಲ್ಲೆ ನಡೆಸುತ್ತಾರೆ. ಇಲ್ಲಿ ನಮಗೆ ರಕ್ಷಣೆ ಸಿಗಬಹುದೆಂದು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿ ರಾಜ್ಯಪಾಲರಿಗೆ ಮನವಿ ನೀಡಬೇಕೆಂದು ಬಂದಿದ್ದೆವು.ಆದರೆ, ರಾಜ್ಯಪಾಲರು ಕೂಡ ಅವಕಾಶ ಕೊಡಲಿಲ್ಲ. ಬೇರೆಲ್ಲ ವಿಷಯಗಳಿಗೆ ಅವಕಾಶ ಸಿಗುತ್ತದೆ.ಅನ್ನದಾತರ ನಮಗೆ ಕನಿಷ್ಟ 10 ನಿಮಿಷ ಅವಕಾಶ ಸಿಗದಿದ್ದಕ್ಕೆ ಸಾಕಷ್ಟು ನೋವಾಗಿದೆ ಎಂದು ಹೇಳಿದರು.

ರೈಲ್ವೆ ನಿಲ್ದಾಣದಲ್ಲಿ ಮೂರು ದಿನಗಳಿಂದ ಮಳೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇಂದು ಪೆÇಲೀಸರು ಆರು ರೈತ ಮಹಿಳೆಯರನ್ನು ರಾಜಭವನಕ್ಕೆ ಕರೆದೊಯ್ದಿದ್ದಾರೆ.ಅವರ ಮೂಲಕ ಮನವಿ ಸಲ್ಲಿಸಲಿದ್ದಾರೆ ಎಂದರು.

ಅತ್ತ ರಾಜಭವನಕ್ಕೆ ತೆರಳಿದ ಮಹಿಳೆಯರನ್ನು ಗೇಟ್ ಒಳಗಡೆಯೂ ಬಿಡಲಿಲ್ಲ. ರಾಜ್ಯಪಾಲರ ಪರವಾಗಿ ಅವರ ವಿಶೇಷ ಅಧಿಕಾರಿಗೆ ಮಹದಾಯಿ ಹೋರಾಟಗಾರರು ಮನವಿ ಸಲ್ಲಿಸಿದರು.

ಆ ಸಂದರ್ಭದಲ್ಲಿ ಮಾತನಾಡಿದ ರೈತ ಮಹಿಳೆ ಹೇಮಾ ಯಾವ್ಗಲ್ ಅವರು ನಾವು ಸಾಕಷ್ಟು ಭರವಸೆ ಇಟ್ಟುಕೊಂಡು ಬಂದಿದ್ದೆವು.ಆದರೆ, ನಮ್ಮನ್ನು ಬಾಗಿಲಿನಿಂದ ಹೊರಗೆ ಕಳಿಸಿದರು ಎಂದು ಕಣ್ಣೀರಿಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ