ಬೆಂಗಳೂರು, ಅ.16-ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ, ಅವರು ಕಾಂಗ್ರೆಸ್‍ಗೆ ಹೋಗುತ್ತಾರೆ ಎಂಬ ವಿಚಾರದಲ್ಲಿ ಹುರುಳಿಲ್ಲ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠೀಯನ್ನುದ್ದೇಶಿಸಿ ಮಾತನಾಡಿದ ಅವರು, ಯಶವಂತಪುರ ಕ್ಷೇತ್ರದಿಂದ 2 ಬಾರಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋತಿದ್ದಾರೆ. ಈ ಬಾರಿಯ ಉಪಚುನಾವಣೆಯಲ್ಲೂ ಅವರೇ ಅಭ್ಯರ್ಥಿ. ಕ್ಷೇತ್ರದಲ್ಲಿ ಅನುಕಂಪ ಇರುವುದರಿಂದ ಈ ಬಾರಿ ಗೆಲುವು ಸಾಧಿಸುತ್ತೇವೆ ಎಂದರು.
ಮಾಜಿ ಶಾಸಕ ಸೋಮಶೇಖರ್ ಅವರು ಸೋಲಿನ ಭೀತಿಯಿಂದ ಪಲಾಯನ ಮಾಡಿ ಬಿಜೆಪಿ ಆಶ್ರಯ ಪಡೆದಿದ್ದಾರೆ ಎಂದು ಆರೋಪಿಸಿದರು.
ಶಾಸಕರು ರಾಜೀನಾಮೆ ನೀಡಿರುವ 17 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅ.23 ಅಥವಾ 24 ರಂದು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದರು.
ಮನೆ ಮನೆಗೆ ಕೈಪಿಡಿ:
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದಿಂದ ಎರಡು ಬಾರಿ ಚುನಾಯಿತರಾಗಿದ್ದ ಮಾಜಿ ಶಾಸಕರು ಎರಡು ಬಾರಿ ಪಕ್ಷಕ್ಕೆ ದ್ರೋಹವೆಸಗಿದ್ದಾರೆ. ಅ.19 ರಂದು 23 ಪ್ರಶ್ನೆಗಳನ್ನೊಳಗೊಂಡ ಕೈಪಿಡಿಯೊಂದನ್ನು ಬಿಡುಗಡೆ ಮಾಡಲಿದ್ದು, ಕ್ಷೇತ್ರದ ಪ್ರತಿ ಮನೆಗೂ ಅದನ್ನು ತಲುಪಿಸಲಾಗುವುದು ಎಂದರು.
ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ 15 ರಿಂದ 20 ಸಭೆಗಳನ್ನು ನಡೆಸಲಾಗಿದೆ ಎಂದರು.
ಬೆಂಗಳೂರಿನ ಐದು ಮಂದಿ ಅನರ್ಹ ಶಾಸಕರು ಚುನಾವಣೆಗೆ ಸಾಕಷ್ಟು ಹಣವನ್ನು ಸಂಗ್ರಹಿಸಿದ್ದಾರೆ. ಈಗಾಗಲೇ ಮತದಾರನ ಓಲೈಸಲು ಆರಂಭಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಇವರ ಬಗ್ಗೆಯೂ ಗಮನಹರಿಸಬೇಕು. ಅಲ್ಲದೆ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ನೂರಾರು ಕೋಟಿ ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ. ನೀತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.
ಟಿ.ಎನ್.ಜವರಾಯಿಗೌಡ ಮಾತನಾಡಿ, ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಅಥವಾ ಕಾಂಗ್ರೆಸ್‍ಗೆ ಹೋಗುವ ಯಾವುದೇ ಉದ್ದೇಶ ಇಲ್ಲ. ಜೆಡಿಎಸ್‍ನಿಂದ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡಲಾಗುವುದು ಅಥವಾ ಬೇರೊಬ್ಬರಿಗೆ ಟಿಕೆಟ್ ನೀಡಿದರೆ ಅವರ ಗೆಲುವಿಗೆ ಶ್ರಮಿಸಲಾಗುವುದು. ಕಾಂಗ್ರೆಸ್‍ನ ಕೆಲವು ಸ್ನೇಹಿತರು ತಮ್ಮನ್ನು ಸಂಪರ್ಕಿಸಿ ಉಪಚುನಾವಣೆಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ನಾವು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಜೆಡಿಎಸ್ ಪಕ್ಷದಲ್ಲೇ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುವುದಾಗಿ ಹೇಳಿದರು.