ಬೆಂಗಳೂರು, ಅ.4-ರಾಜ್ಯ ವಿಧಾನಸಭೆಯ ವಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆ ಚುರುಕಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ದೆಹಲಿಗೆ ತೆರಳಿರುವುದು ತೀವ್ರ ಕುತೂಹಲ ಕೆರಳಿಸಿದೆ.
ವಿಪಕ್ಷ ನಾಯಕನ ಸ್ಥಾನಕ್ಕಾಗಿ ಕಾಂಗ್ರೆಸ್‍ನಲ್ಲಿ ಇತ್ತೀಚೆಗೆ ಪ್ರಬಲ ಪೈಪೆÇೀಟಿ ಆರಂಭವಾಗಿದೆ.ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕನಾಗುತ್ತಾರೆ ಎಂಬ ನಿರೀಕ್ಷೆಗಳಿದ್ದವು.ಆದರೆ ಇತ್ತೀಚಿನ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಅವರನ್ನು ಹೊಣೆ ಮಾಡಿರುವ ಮೂಲ ಕಾಂಗ್ರೆಸ್ಸಿಗರು ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಬೆಳೆಸುವಂತೆ ಒತ್ತಡ ಹೇರಿದ್ದಾರೆ.
ಏಕ ವ್ಯಕ್ತಿ ನಾಯಕತ್ವಕ್ಕೆ ಕಾಂಗ್ರೆಸ್ ಜೋತು ಬಿದ್ದಿದ್ದರಿಂದಾಗಿ ಈ ಹಿಂದೆ ನಡೆದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಸೋಲು ಕಂಡಿದೆ.ಹಾಗಾಗಿ ಈ ಮೊದಲಿನಂತೆ ಸಾಮೂಹಿಕ ನಾಯಕತ್ವಕ್ಕೆ ಮಣೆ ಹಾಕಬೇಕೆಂದು ಮೂಲ ಕಾಂಗ್ರೆಸ್ಸಿಗರು ಒತ್ತಾಯಿಸಿದ್ದಾರೆ.
ರಾಹುಲ್‍ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹಂಗಾಮಿ ಅಧ್ಯಕ್ಷರಾಗಿರುವ ಸೋನಿಯಾಗಾಂಧಿಯವರು ಮೂಲ ಕಾಂಗ್ರೆಸ್ಸಿಗರಿಗೆ ಹೆಚ್ಚಾಗಿ ಮಣೆ ಹಾಕುತ್ತಿದ್ದು, ಸಿದ್ದರಾಮಯ್ಯ ಬಣಕ್ಕೆ ತಲೆ ನೋವು ತಂದಿಟ್ಟಿದೆ.
ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗಿ ಸುಮಾರು ಮೂರು ತಿಂಗಳು ಸಮಯವಾಗುತ್ತಾ ಬಂದರೂ, ಕಾಂಗ್ರೆಸ್‍ನಲ್ಲಿ ಇನ್ನು ವಿಪಕ್ಷನಾಯಕನ ಆಯ್ಕೆ ಸಾಧ್ಯವಾಗಿಲ್ಲ.
ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನೇ ಪ್ರತಿಪಕ್ಷ ನಾಯಕನಾಗಿ ಆಯ್ಕೆ ಮಾಡಬೇಕೆಂದು ಒತ್ತಡ ಹೇರಲು ಕೆಲವು ನಾಯಕರು ದೆಹಲಿಗೆ ತೆರಳಿದ್ದರು. ಆದರೆ ಅವರ ಯಾರ ಭೇಟಿಗೂ ಹೈಕಮಾಂಡ್ ಅವಕಾಶ ಕೊಟ್ಟಿಲ್ಲ. ಖುದ್ದಾಗಿ ಸಿದ್ದರಾಮಯ್ಯ ಅವರನ್ನೇ ಭೇಟಿ ಮಾಡಲು ಸೋನಿಯಾಗಾಂಧಿಯವರು ಸಮಯ ನೀಡಲಿಲ್ಲ. ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ ಅವರು ಮತ್ತೆ ದೆಹಲಿಯತ್ತ ಮುಖ ಮಾಡದೆ ಇಲ್ಲೇ ಉಳಿದುಕೊಂಡಿದ್ದು, ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದು, ಪಕ್ಷದ ವಿವಿಧ ಸಭೆಗಳಲ್ಲಿ ಭಾಗವಹಿಸುವ ಮೂಲಕ ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯರಾಗಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಏಕ ನಾಯಕತ್ವಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್, ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಸೇರಿದಂತೆ ಘಟಾನುಘಟಿ ನಾಯಕರು ಪಣತೊಟ್ಟು ನಿಂತಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಹೆಸರು ವಿಪಕ್ಷ ನಾಯಕನ ಸ್ಥಾನಕ್ಕೆ ಪ್ರಮುಖವಾಗಿ ಕೇಳಿ ಬಂದಿತ್ತು. ಆದರೆ ಅವರ ನ್ಯಾಯಾಂಗ ಬಂಧನದಲ್ಲಿರುವುದರಿಂದ ಅನಿವಾರ್ಯವಾಗಿ ಬೇರೆ ನಾಯಕರನ್ನು ಆಯ್ಕೆ ಮಾಡುವ ಸ್ಥಿತಿ ಎದುರಾಗಿದೆ.
ಸಿದ್ದರಾಮಯ್ಯ ಅವರನ್ನೇ ಪುನರಾಯ್ಕೆ ಮಾಡಲು ಹೈಕಮಾಂಡ್‍ನ ಕೆಲವು ನಾಯಕರು ಆಸಕ್ತಿ ಹೊಂದಿದ್ದರಾದರೂ ಮೂಲ ಕಾಂಗ್ರೆಸ್ಸಿಗರು ಬೆಂಬಲ ನೀಡುತ್ತಿಲ್ಲ.
ಹೀಗಾಗಿ ಬಹುಪಾಲು ನಾಯಕರ ವಿರೋಧದ ನಡುವೆ ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟಲು ಹೈಕಮಾಂಡ್ ಕೂಡ ಹಿಂಜರಿದಿದೆ.
ಇತ್ತೀಚಿನ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ವಿಪಕ್ಷ ನಾಯಕ ಸ್ಥಾನ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಸಲಹೆ ನೀಡಿತ್ತು ಎನ್ನಲಾಗಿದೆ.
ಹಾಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಸಿದ್ದರಾಮಯ್ಯ ಅವರ ಬೆಂಬಲಿಗರಾಗಿ ಗುರುತಿಸಿ ಕೊಂಡಿರುವುದು ಮೂಲ ಕಾಂಗ್ರೆಸ್ಸಿಗರ ಸಿಡಿಮಿಡಿಯನ್ನು ಹೆಚ್ಚಿಸಿದೆ.
ಹೀಗಾಗಿ ವಿಪಕ್ಷ ನಾಯಕ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡೂ ಬದಲಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಒಂದು ವೇಳೆ ಎಚ್.ಕೆ.ಪಾಟೀಲ್ ಅವರಿಗೆ ವಿಪಕ್ಷ ನಾಯಕ ಸ್ಥಾನ ದಕ್ಕಿದ್ದೇ ಆದರೆ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರನ್ನೇ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಮುಂದುವರೆಸಿದರೆ ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡುವ ನಿರೀಕ್ಷೆ ಇದೆ.
ಇಷ್ಟು ದಿನ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ತಟಸ್ಥವಾಗಿದ್ದ ಹೈಕಮಾಂಡ್ ನವರಾತ್ರಿ ಹಿಂದೆ-ಮುಂದೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದು, ಎಲ್ಲಾ ನಾಯಕರ ಜೊತೆ ಸಮಾಲೋಚನೆಗೆ ಮುಂದಾಗಿದೆ.
ಮೊದಲ ಹಂತದಲ್ಲಿ ಇಂದು ಎಚ್.ಕೆ.ಪಾಟೀಲ್ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ಪರಮೇಶ್ವರ್ ಅವರು ಈಗಾಗಲೇ ಭೇಟಿ ಮಾಡಿ ತಮ್ಮ ಅಭಿಪ್ರಾಯ ಹೇಳಿ ಬಂದಿದ್ದಾರೆ.
ಉಳಿದ ನಾಯಕರ ಜೊತೆ ಸಮಾಲೋಚನೆ ನಡೆಸಿ ಹೈಕಮಾಂಡ್ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.