ಉರಿಯುವ ಬೆಂಕಿಗೆ ತುಪ್ಪ ಸುರಿದಂತಾದ ಸಿಎಂ ಹೇಳಿಕೆ

ಬೆಂಗಳೂರು,ಅ.4- ದಸರಾ ಹಬ್ಬದೊಳಗೆ ನೆರೆ ಪರಿಹಾರ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಸಂತ್ರಸ್ತರಿಗೆ ಕೇಂದ್ರದಿಂದ ವರದಿ ತಿರಸ್ಕಾರ ಹಾಗೂ ರಾಜ್ಯದ ಖಜಾನೆ ಖಾಲಿಯಾಗಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಪರಿಹಾರವನ್ನು ಬಿಡುಗಡೆ ಮಾಡಲಿದೆ ಎಂದು ಸಂತ್ರಸ್ತರು ಚಾತಕಪಕ್ಷಿಯಂತೆ ಕಾದು ಕುಳಿತಿದ್ದರು.ಆದರೆ ರಾಜ್ಯ ಸರ್ಕಾರದ ವರದಿಯನ್ನೇ ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಸಂಕಷ್ಟದಲ್ಲಿದ್ದ ಸಂತ್ರಸ್ತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದರ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಹೇಳಿರುವುದು ಸಂತ್ರಸ್ತರನ್ನ ಅಕ್ಷರಶಃ ದಂಗುಬಡಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅವರ ಸಂಪುಟದ  ಸಹೋದ್ಯೋಗಿಗಳು ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗಲಿದೆ ಎಂದೇ ಜನರ ಮೂಗಿಗೆ ತುಪ್ಪ ಸವರಿದ್ದರು.

ಈ ಮಾತನ್ನು ನಂಬಿದ ಸಂತ್ರಸ್ತರು ದಸರಾದೊಳಗೆ ತಮಗೊಂದಿಷ್ಟು  ಪರಿಹಾರ ಸಿಗಲಿದೆ ಎಂಬ ಆಶಾಭಾವನೆ ಇಟ್ಟುಕೊಂಡಿದ್ದರು. ಇದೀಗ ವರದಿಯೇ ತಿರಸ್ಕಾರವಾಗಿರುವುದರಿಂದ ನೆರೆ ಪರಿಹಾರ ಬಿಡುಗಡೆ ಇನ್ನಷ್ಟು  ವಿಳಂಬವಾಗುವುದರಲ್ಲಿ ಸಂದೇಹವೇ ಇಲ್ಲ.

ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಗೂ, ಕೇಂದ್ರದ ಅಧ್ಯಯನ ತಂಡದ ವರದಿಗೂ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿರುವುದರಿಂದ ಮತ್ತೊಮ್ಮೆ ಸಮೀಕ್ಷೆ ನಡೆಸುವ ಸಾಧ್ಯತೆ ಇದೆ.

ಪುನಃ ರಾಜ್ಯದಿಂದ ನೆರೆಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆಯಾಗಬೇಕು.ನಂತರ ಈ ವರದಿ ಕೇಂದ್ರಕ್ಕೆ ಸಲ್ಲಿಕೆಯಾಗಬೇಕು.ಈ ಹಿಂದೆ ಕೇಂದ್ರದಿಂದ ಆರಂಭಿಸಿದ ವಿವಿಧ ಇಲಾಖೆಗಳನ್ನೊಳಗೊಂಡ ಉನ್ನತ ಅಧಿಕಾರಿಗಳ ನಿಯೋಗ ನೀಡಿರುವ ವರದಿಯನ್ನು ತಾಳೆ ಹಾಕಬೇಕು.ನಂತರವೇ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರಿಗಳ ಸಭೆ ಸೇರಿ ಪರಿಹಾರವನ್ನು ನಿರ್ಧರಿಸಲಾಗುತ್ತದೆ.

ಈ ಎಲ್ಲ  ಪ್ರಕ್ರಿಯೆಗಳು ಮುಗಿಯಲು ಕನಿಷ್ಟ ಪಕ್ಷ ಒಂದು ತಿಂಗಳು ಸಮಯ ಬೇಕಾಗುತ್ತದೆ. ಈಗಾಗಲೇ ಮನೆಮಠ, ಆಸ್ತಿ ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗಿರುವ ಸಂತ್ರಸ್ತರಿಗೆ ಸದ್ಯಕ್ಕೆ ಗಂಜಿ ಕೇಂದ್ರವೇ ಆಧಾರ ಎಂಬಂತಾಗಿದೆ.

ರಾಜ್ಯಕ್ಕೆ ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ಕ್ಯಾತೆ ತೆಗೆದಿದ್ದು, ಪ್ರವಾಹದಿಂದ ಉಂಟಾಗಿರುವ ನಷ್ಟಕ್ಕೆ ಪರಿಹಾರ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ.

ಪರಿಹಾರ ಕುರಿತು ರಾಜ್ಯದ ಬಳಿ ಕೆಲ ಸ್ಪಷ್ಟನೆ ಕೇಳಿರುವ ಕೇಂದ್ರ ಸರ್ಕಾರ, ನಷ್ಟದ ಪ್ರಮಾಣವನ್ನು ಅಧಿಕೃತವಾಗಿ ಪ್ರಮಾಣೀಕರಿಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ರಾಜ್ಯ ಸರ್ಕಾರ, ಪ್ರವಾಹದಿಂದ ಅಂದಾಜು 38,000 ಕೋಟಿಗೂ ಅಧಿಕ ಪ್ರಮಾಣದ ನಷ್ಟ ಉಂಟಾಗಿದೆ.ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ ನಿಯಮಾವಳಿ ಪ್ರಕಾರ 3,500 ಕೋಟಿ ಪರಿಹಾರವನ್ನು ತಕ್ಷಣ ನೀಡಬೇಕೆಂದು ಪ್ರಸ್ತಾವನೆಯಲ್ಲಿ ತಿಳಿಸಿತ್ತು.

ಈ ಹಿನ್ನಲೆಯಲ್ಲಿ ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದೆ.ಇದೀಗ ಪರಿಹಾರ ನೀಡಲು ಕ್ಯಾತೆ ತೆಗೆದಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಗೂ ಕೇಂದ್ರ ತಂಡ ಅಧ್ಯಯನ ನಡೆಸಿರುವ ವರದಿಗೂ ತಾಳೆಯಾಗುತ್ತಿಲ್ಲ. ಕೂಡಲೇ ಈ ಕುರಿತು ಸ್ಪಷ್ಟೀಕರಣ ನೀಡಬೇಕೆಂದು ಸೂಚಿಸಿದೆ.

ನಿಯಮಾವಳಿಗಳನ್ನು ಗಾಳಿಗೆ ತೂರಿ ನಷ್ಟವನ್ನು ಅಂದಾಜಿಸಲಾಗಿದೆ.ನಷ್ಟದ ಪ್ರಮಾಣವನ್ನು ಬೇಕಾಬಿಟ್ಟಿ ಹೆಚ್ಚಿಸಲಾಗಿದೆ.ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯಕ್ಕೆ ಸೂಚನೆ ನೀಡಿದೆ.

ನಿಮ್ಮ ಪ್ರಸ್ತಾವನೆಯಲ್ಲಿ ಒಟ್ಟು 2.50 ಲಕ್ಷ ಮನೆಗಳು ಸಂಪೂರ್ಣ ನೆಲಕಚ್ಚಿವೆ ಎಂಬ ವಿವರಗಳಿವೆ. ಆದರೆ, ಕೇಂದ್ರದ ಅಧ್ಯಯನ ತಂಡ ಸಲ್ಲಿಸಿರುವ ವರದಿಯ ಪ್ರಕಾರ ಈ ಪ್ರಮಾಣ ಕೇವಲ 1.15 ಲಕ್ಷ ಇವೆ. ಪ್ರತಿ ಮನೆಗೆ 5 ಲಕ್ಷ ರೂ.ನಂತೆ ಪರಿಹಾರ ಕೋರಲಾಗಿದೆ. ನೆಲಕಚ್ಚಿದ ಮನೆಗಳೆಲ್ಲ 5 ಲಕ್ಷ ಬೆಲೆ ಬಾಳುತ್ತಿದ್ದವೇ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಕೇಂದ್ರ, ಈ ಬಗ್ಗೆ ಪ್ರಮಾಣೀಕರಿಸುವಂತೆ ಸೂಚನೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ