ರಾಜ್ಯಾಧ್ಯಕ್ಷರ ವಿರುದ್ಧ ಕೋಪ-ತಾಪ ಪ್ರದರ್ಶಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು,ಅ.3- ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್‍ಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಇಂದು ಬೆಳಗ್ಗೆ 9.45ಕ್ಕೆ  ಡಾಲರ್ಸ್ ಕಾಲೋನಿಯ  ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡಿ ಸುಮಾರು  ಅರ್ಧ ಗಂಟೆಗೂ ಹೆಚ್ಚು ಕಾಲ ಯಡಿಯೂರಪ್ಪನವರೊಂದಿಗೆ ಮಾತುಕತೆ ನಡೆಸಿದರು.

ಮೇಲ್ನೋಟಕ್ಕೆ ಇದೊಂದು ಸೌಹರ್ದಾಯುತ ಭೇಟಿ ಎಂದು ಹೇಳಲಾಗಿತ್ತಾದರೂ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುತ್ತಿರುವ ರಾಜ್ಯಾಧ್ಯಕ್ಷರ ವಿರುದ್ಧ ಕೋಪ-ತಾಪ ಪ್ರದರ್ಶಿಸಿದ್ದಾರೆ ಎಂದು ಹೇಳಲಾಗಿದೆ.

ಯಡಿಯೂರಪ್ಪನವರು ನಳೀನ್‍ಕುಮಾರ್ ಕಟೀಲ್‍ಗೆ ಮಹಾಮಂಗಳಾರತಿ ಮಾಡಿದ್ದರಿಂದಲೇ ಅವರು ಸಿಎಂ ನಿವಾಸದಿಂದ ಬೇಸರಿಂದಲೇ ಹೊರಬಂದು ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡದೆ  ನಿರ್ಗಮಿಸಿದ್ದಾರೆ.

ಸುಮಾರು 30 ನಿಮಿಷಗಳ ಕಾಲ ನಡೆದ ಮಾತುಕತೆ ವೇಳೆ ಯಡಿಯೂರಪ್ಪ, ನಳೀನ್‍ಕುಮಾರ್ ಕಟೀಲ್ ಅವರ ಕಾರ್ಯವೈಖರಿಗೆ ಕೆಂಡಕಾರಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಪಕ್ಷದಲ್ಲಿ ಕೆಲವು  ತೀರ್ಮಾನಗಳನ್ನು ಕೈಗೊಳ್ಳುವಾಗ ನನ್ನನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ಮಾಡುತ್ತಿದ್ದೀರಿ, ಪದಾಧಿಕಾರಿಗಳ ನೇಮಕಾತಿ, ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆ ಸೇರಿದಂತೆ ಕೆಲವು ತೀರ್ಮಾನಗಳಲ್ಲಿ ದುರುದ್ದೇಶಪೂರ್ವಕವಾಗಿ ದೂರ ಇಟ್ಟಿದ್ದೀರಿ. ನನ್ನನ್ನು ನಿರ್ಲಕ್ಷ ಮಾಡಿ ಪಕ್ಷ ಕಟ್ಟುತ್ತೇನೆ ಎಂಬ ಭ್ರಮೆ ಬೇಡ  ಎಂದು ಬಿಎಸ್‍ವೈ ನೇರ ಮಾತುಗಳಲ್ಲಿ ಎಚ್ಚರಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ನಿರ್ಮಲ್‍ಕುಮಾರ್ ಸುರಾನ ಹಾಗೂ ಭಾನುಪ್ರಕಾಶ್ ಅವರನ್ನು ಪಕ್ಷದ  ಹುದ್ದೆಯಿಂದ ತೆಗೆದು ಹಾಕಲಾಗಿತ್ತು. ಈಗ ನೀವು ನನ್ನನ್ನು ಸೌಜನ್ಯಕ್ಕಾದರೂ ಕೇಳದೆ ಅವರನ್ನು ಮರುಸೇರ್ಪಡೆ ಮಾಡಿಕೊಂಡಿದ್ದೀರಿ. ಇದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತು ಎಂದು  ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಬಿಬಿಎಂಪಿ  ಚುನಾವಣೆಯಲ್ಲಿ ಶಾಸಕರು, ಲೋಕಸಭಾ ಸದಸ್ಯರು, ರಾಜ್ಯಸಭೆ ಮತ್ತು ವಿಧಾನಪರಿಷತ್ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿ ಮೇಯರ್ ಮತ್ತು ಉಪಮೇಯರ್ ಯಾರಾಗಬೇಕು ಎಂಬುದರ ಬಗ್ಗೆ ಚರ್ಚಿಸಿ ನಿರ್ಧರಿಸಲು ಸಮಿತಿ ರಚಿಸಲಾಗಿತ್ತು.

ನಾನು ಈ ಸಂಬಂಧ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‍ನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷರು ಸೇರಿದಂತೆ ಹಿರಿಯರ ಜೊತೆ ಚರ್ಚಿಸಿ ಈ ತೀರ್ಮಾನ ಕೈಗೊಂಡಿದ್ದೆ.ಆದರೆ ನೀವು ಸಮಿತಿಯನ್ನೇ ರಚನೆ ಮಾಡಿಲ್ಲವೆಂದು ಹೇಳಿ ನನಗೆ ಮುಜುಗರ ಸೃಷ್ಟಿಸಿದ್ದೀರಿ.ಸಮಿತಿಯನ್ನು ಬರ್ಕಾಸ್ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಮೊದಲು ಮೇಯರ್ ಚುನಾವಣೆಯಲ್ಲಿ ಬಿಬಿಎಂಪಿ ಸದಸ್ಯರಾದ  ಪದ್ಮನಾಭ ರೆಡ್ಡಿ , ಎಲ್.ಶ್ರೀನಿವಾಸ್, ಮುನೇಂದ್ರ ಕುಮಾರ್ ಅವರಲ್ಲಿ ಯಾರಾದರು ಒಬ್ಬರನ್ನು ಮೇಯರ್ ಮಾಡಬೇಕೆಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಇದ್ದಕ್ಕಿದ್ದಂತೆ ಕೊನೆ ಕ್ಷಣದಲ್ಲಿ ಗೌತಮ್‍ಕುಮಾರ್ ಜೈನ್ ಅವರನ್ನು ಮೇಯರ್ ಅಭ್ಯರ್ಥಿ ಮಾಡಿದ್ದರ ಉದ್ದೇಶವಾದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ನಾನು  ಕುಳಿತಿರುವ ಕುರ್ಚಿ ಮುಳ್ಳಿನ ಹಾಸಿಗೆ ಎಂಬುದು ನನಗೆ ತಿಳಿದಿದೆ. ಕಾರಣಾಂತರಗಳಿಂದ ಎಷ್ಟೇ ನೋವು ಬಂದರೂ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇನೆ. ನೀವು ರಾಷ್ಟ್ರೀಯ ನಾಯಕರೊಬ್ಬರ  ಅಣತಿಯಂತೆ ನಡೆಯುವುದಾದರೆ ನನ್ನದೇನೂ ಅಭ್ಯಂತರವಿಲ್ಲ.ನಿಮ್ಮಗಿಚ್ಛೆ ಬಂದಂತೆ  ನಡೆದುಕೊಂಡರೆ ನಾನು ಕೂಡ  ಅದೇ ರೀತಿ ನಡೆದುಕೊಳ್ಳ ಬೇಕಾಗುತ್ತದೆ.

ಸರ್ಕಾರದ  ತೀರ್ಮಾಗಳಲ್ಲಿ ನೀವು ಮೂಗು ತೂರಿಸುವುದಾದರೆ ಪಕ್ಷದ ತೀರ್ಮಾನಗಳಲ್ಲಿ ನನ್ನನ್ನು ಕೇಳಬೇಕೆಂಬ ಸೌಜನ್ಯವಾದರೂ ಬೇಡವೆ ಎಂದು ಬಿಎಸ್‍ವೈ ಅಸಮಾಧಾನಗೊಂಡರು. ಇದರಿಂದ ಕಟೀಲ್  ಬಿಎಸ್‍ವೈ ನಿವಾಸದಿಂದ ಆತುರಾತುರವಾಗಿ ನಿರ್ಗಮಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ