ತಾರಕಕ್ಕೇರಿದ ಸಂಘರ್ಷ-ಭಾರೀ ದಾಳಿಯಲ್ಲಿ 500ಕ್ಕೂ ಹೆಚ್ಚು ಸೌದಿ ಯೋಧರ ಸಾವು

ಕೈರೋ, ಸೆ.30-ಯೆಮೆನ್ ಬಂಡುಕೋರರು ಮತ್ತು ಸೌದಿ ಅರೇಬಿಯಾ ನೇತೃತ್ವದ ಮಿತ್ರಪಡೆಗಳ ನಡುವಣಾ ಸಂಘರ್ಷ ತಾರಕಕ್ಕೇರಿದೆ. ಉಭಯ ದೇಶಗಳ ಗಡಿ ಭಾಗದಲ್ಲಿ ತಾವು ನಡೆಸಿದ ಭಾರೀ ದಾಳಿಯಲ್ಲಿ 500ಕ್ಕೂ ಹೆಚ್ಚು ಸೌದಿ ಯೋಧರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಉಗ್ರರು ಘೋಷಿಸಿದ್ದಾರೆ.

ತಾವು ನಡೆಸಿದ ದಾಳಿಯಲ್ಲಿ ಸೌದಿ ಅರೇಬಿಯಾದ ಅನೇಕ ಮಿಲಿಟರಿ ವಾಹನಗಳು ಧ್ವಂಸಗೊಂಡಿದ್ದು, ವೈರಿ ಪಡೆಗೆ ಸಾಕಷ್ಟು ಹಾನಿಯಾಗಿದೆ ಎಂದೂ ಬಂಡುಕೋರರು ತಿಳಿಸಿದ್ದಾರೆ.

ಕಳೆದ ಐದು ವರ್ಷಗಳ ಅಂತರ್ಯುದ್ಧದಿಂದ ನಲುಗುತ್ತಿರುವ ಇರಾನ್ ನಡೆಸಿದ ಭಾರೀ ಮಹತ್ವದ ಕಾರ್ಯಾಚರಣೆ ಮತ್ತು ಗೆಲುವು ಇದಾಗಿದೆ ಎಂದು ಬಣ್ಣಿಸಲಾಗಿದೆ.

ತಾವು ನಡೆಸಿದ ದಾಳಿ ಮತ್ತು ಸೆರೆ ಹಿಡಿದ ಸೌಧಿ ಸೇನಾಪಡೆಯ ಉನ್ನತಾಧಿಕಾರಿಗಳ ಫೋಟೋಗಳು ಮತ್ತು ದೃಶ್ಯಗಳನ್ನು ಯೆಮೆನ್ ಬಂಡುಕೋರರ ಮುಖಂಡರು ಬಿಡುಗಡೆ ಮಾಡಿದ್ದಾರೆ. ಆದರೆ ಈ ಬಗ್ಗೆ ಸೌದಿಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇರಾನ್ ಉಗ್ರರೊಂದಿಗೆ ಕೈಜೋಡಿಸಿರುವ ಈ ಬಂಡುಕೋರರನ್ನು ಹೌತಿಗಳು ಎಂದು ಕರೆಯಲಾಗುತ್ತದೆ. ಸೌದಿ ಮತ್ತು ಅಮೆರಿಕನ್ನರ ವಿರುದ್ಧ ಸದಾ ದ್ವೇಷ ಕಾರುತ್ತಿರುವ ಈ ಉಗ್ರರು ಇತ್ತೀಚೆಗೆ ಸೌದಿಯಲ್ಲಿ ನಡೆದ ಪ್ರಮುಖ ದಾಳಿಗಳಿಗೆ ಕಾರಣರಾಗಿದ್ದಾರೆ.

ಹೌತಿ ಉಗ್ರರ ಒಡೆತನದಲ್ಲಿರುವ ಅಲ್ ಮಸೀರಾ ಟೆಲಿವಿಷನ್ ನೆಟ್‍ವರ್ಕ್‍ನಲ್ಲಿ ನಿನ್ನೆ ಈ ದಾಳಿಯ ದೃಶ್ಯಗಳನ್ನು ಬಿಡುಗಡೆ ಮಾಡಲಾಗಿದೆ. ಸೆರೆಯಾಳು ಸೌದಿ ಅಧಿಕಾರಿಗಳು ಮತ್ತು ಯೋಧರನ್ನು ಗುಡ್ಡಗಾಡು ಪ್ರದೇಶದಲ್ಲಿ ಬಂಡುಕೋರರು ಎಳೆದೊಯ್ಯುತ್ತಿರುವ ದೃಶ್ಯ ಇದರಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ