ಬೆಂಗಳೂರು, ಸೆ.20- ಪೈಲ್ವಾನ್ ಕನ್ನಡ ಚಲನಚಿತ್ರದ ಕಾಪಿರೈಟ್ ಉಲ್ಲಂಘಿಸಿ ಫೇಸ್‍ಬುಕ್ ಖಾತೆಯಲ್ಲಿ ಸಿನಿಮಾದ ಲಿಂಕ್‍ನ್ನು ಅಪ್‍ಲೋಡ್ ಮಾಡಿದ್ದ ಯುವಕನನ್ನು ಸಿಸಿಬಿಯ ಸೈಬರ್ ಕ್ರೈಂ ಪೆÇಲೀಸರು ಬಂಧಿಸಿದ್ದಾರೆ.
ನೆಲಮಂಗಲ ತಾಲೂಕಿನ ಸೋಮಪುರ ಹೋಬಳಿಯ ಇಮಚೇನಹಳ್ಳಿ ನಿವಾಸಿ ರಾಕೇಶ್ (19) ಬಂಧಿತ ಯುವಕ.
ಈತ ರಾಕೇಶ್ ವಿರಾಟ್ ಎಂಬ ಹೆಸರಿನಲ್ಲಿ ಫೇಸ್‍ಬುಕ್ ಖಾತೆಯನ್ನು ಹೊಂದಿದ್ದು, ಚಲನಚಿತ್ರ ಬಿಡುಗಡೆಯಾದ ದಿನವೇ ಚಲನಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಬಹುದಾದ ಲಿಂಕ್‍ನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಅಪ್‍ಲೋಡ್ ಮಾಡಿ ಫೇಸ್‍ಬುಕ್ ಸ್ನೇಹಿತರು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
ತನ್ನ ಫೇಸ್‍ಬುಕ್ ಖಾತೆಯಿಂದ ತನ್ನಿಬ್ಬರ ಸ್ನೇಹಿತರಿಗೂ ಚಲನಚಿತ್ರದ ಲಿಂಕ್ ಶೇರ್ ಮಾಡಿರುವುದು ಕಂಡು ಬಂದಿದೆ.
ಸೆ. 16ರಂದು ಪೈಲ್ವಾನ್ ಕನ್ನಡ ಚಲನಚಿತ್ರದ ನಿರ್ಮಾಪಕರು ಈ ಬಗ್ಗೆ ಸೈಬರ್ ಕ್ರೈಂ ಪೆÇಲೀಸರಿಗೆ ದೂರು ನೀಡಿದ್ದರು. ದೂರಿನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಿಸಿಬಿ ಘಟಕದ ಸೈಬರ್ ಕ್ರೈಂ ಪೆÇಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.