ನಿಮಗೆ ದ್ವೇಷ ಇದದ್ದು ನನ್ನ ಮೇಲೆ-ಬಡವರ ಮೇಲೇಕೆ ನಿಮ್ಮ ಕೋಪ- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಸೆ.20-ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮಹತ್ವಾಕಾಂಕ್ಷೆಯ ಬಡವರ ಬಂಧು ಯೋಜನೆಯನ್ನು ನಿರ್ಲಕ್ಷಿಸುವ ಮೂಲಕ ಬಡವರ ವಿರೋಧಿಯಾಗಿದ್ದೀರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನಿಮಗೆ ದ್ವೇಷ ಇದದ್ದು ನನ್ನ ಮೇಲೆ ಅಲ್ಲವೇ ಯಡಿಯೂರಪ್ಪನವರೇ? ಆದರೆ ಬಡವರ ಮೇಲೇಕೆ ನಿಮ್ಮ ಕೋಪ ಎಂದು ಪ್ರಶ್ನಿಸಿದ್ದಾರೆ.

ಸೇಡಿನ ರಾಜಕೀಯ ಮಾಡುವುದಿಲ್ಲ ಎಂದು ವಿಧಾನಸಭೆಯ ಸದನದಲ್ಲಿ ಹೇಳಿದ್ದ ನೀವು ಅಧಿಕಾರ ವಹಿಸಿಕೊಂಡ ನಂತರ  ಮೈತ್ರಿ ಸರ್ಕಾರದ ಕಾರ್ಯಕ್ರಮಗಳ ವಿಷಯದಲ್ಲಿ ಮಾಡಿದ್ದೆಲ್ಲವೂ ಸೇಡಿನ ಕ್ರಮ. ಬಡವರ ಬಂಧು ಯೋಜನೆಯನ್ನು ನಿರ್ಲಕ್ಷಿಸಿ ನೀವು ಬಡವರ ವಿರೋಧಿಯಾಗಿದ್ದೀರಿ ಎಂದು ಯಡಿಯೂರಪ್ಪ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್ಥಿಕವಾಗಿ ಅಶಕ್ತರಾದವರು, ಸಣ್ಣ ವ್ಯಾಪಾರಿಗಳನ್ನು ಲೇವಾದೇವಿದಾರರ ವಿಷ ವರ್ತುಲದಿಂದ ಪಾರು ಮಾಡುವ ಸದುದ್ದೇಶದಿಂದ ಬಡವರ ಬಂಧು ಕಾರ್ಯಕ್ರಮವನ್ನು ಜಾರಿಗೆ ತರಲಾಗಿತ್ತು. ಬಡವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದ ಈ ಯೋಜನೆಯನ್ನು ಕೊಲ್ಲುತ್ತಿರುವ ನೀವು ಬಡವರ ಸ್ವಾಭಿಮಾನವನ್ನು ಕೆಣಕ್ಕಿದ್ದೀರಿ ಎಂದು ಆರೋಪಿಸಿದ್ದಾರೆ.

ಬಡವರ ಬಂಧು ಯೋಜನೆ ವಿಫಲವಾಗಬಾರದು. ಇದರಲ್ಲಿ ಜಾತಿ, ಧರ್ಮ ಪಕ್ಷಗಳಿಲ್ಲ. ಅಶಕ್ತರನ್ನು ಸಬಲರನ್ನಾಗಿಸಿ  ದೇಶದ ಅಭಿವೃದ್ದಿಯಲ್ಲಿ ಅವರನ್ನು ಒಳಗೊಳ್ಳುವಂತೆ ಮಾಡುವ ಪ್ರಮುಖ ಆರ್ಥಿಕ ಚಟುವಟಿಕೆ. ಈ ಕಾರ್ಯಕ್ರಮಕ್ಕೆ ಯಡಿಯೂರಪ್ಪನವರು ಚೈತನ್ಯ ತುಂಬಬೇಕು. ಇಲ್ಲವೇ ಹೋರಾಟ ಎದುರಿಸಬೇಕು ಎಂದು ಟ್ವಿಟರ್‍ನಲ್ಲಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಬಹುಮತದ ಸರ್ಕಾರ ನಿಗದಿಪಡಿಸಿದ್ದ ಕ್ಷೇತ್ರಗಳ ಅಭಿವೃದ್ಧಿಯ ಅನುದಾನವನ್ನು ಕಡಿತ ಮಾಡಿ ತಮ್ಮ ಪಕ್ಷಪಾತಿ ನಿಲುವನ್ನು ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಗತ್ಯ ಬಿದ್ದರೆ ಮತ್ತಷ್ಟು ನೀಡಲಿ. ಆದರೆ ಕೊಟ್ಟದ್ದನ್ನು ಕಿತ್ತುಕೊಳ್ಳುವುದು ಯಾವ ನ್ಯಾಯ. ಇದು ನಾಚಿಕೆಗೇಡಿನ ರಾಜಕೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ