ಅನರ್ಹ ಶಾಸಕರಿಗಿಲ್ಲ ರಿಲೀಫ್; ವಿಚಾರಣೆ ಸೆ.23ಕ್ಕೆ ಮುಂದೂಡಿದ ಸುಪ್ರೀಂ

ನವದೆಹಲಿ: ಕರ್ನಾಟಕದ 17 ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್​ನಲ್ಲಿ ಇಂದು ಮತ್ತೆ ತೀವ್ರ ಹಿನ್ನಡೆ ಉಂಟಾಗಿದೆ. ನ್ಯಾ. ಮೋಹನ್ ಶಾಂತನಗೌಡರ ವಿಚಾರಣೆಯಿಂದ ಹಿಂದೆ ಸರಿದ ಕಾರಣ ಅರ್ಜಿ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಲಾಗಿದೆ.

ಈಗಾಗಲೇ ತಡವಾಗಿದೆ ವಿಚಾರಣೆಗೆ ತೆಗೆದುಕೊಳ್ಳಿ ಎಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಮನವಿ ಮಾಡಿದ್ದರು. ನ್ಯಾಯಮೂರ್ತಿಗಳು ಒಪ್ಪದಿರುವುದರಿಂದ ವಿಚಾರಣೆ ಮುಂದೂಡುತ್ತಿದ್ದೇವೆ ಎಂದು ನ್ಯಾ. ಎನ್​.ವಿ. ರಮಣ ಪ್ರತಿಕ್ರಿಯಿಸಿದ್ದಾರೆ.

ನ್ಯಾ. ಮೋಹನ್ ಶಾಂತನಗೌಡರ ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ಆದರೆ, ಅವರು ಕರ್ನಾಟಕ ಮೂಲದವರು ಮತ್ತು ಅನರ್ಹ ಶಾಸಕ ಬಿ.ಸಿ.ಪಾಟೀಲ್​ ಅವರ ದೂರದ ಸಂಬಂಧಿ. ಹೀಗಾಗಿ ಅವರು ಸ್ವಇಚ್ಛೆ ಮೇರೆಗೆ ವಿಚಾರಣೆಯಿಂದಲೇ ಹಿಂದೆ ಸರಿದಿದ್ದಾರೆ. ಹೀಗಾಗಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 17 ಜನರನ್ನು ಸ್ಪೀಕರ್​ ರಮೇಶ್​ ಕುಮಾರ್​ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ರಮೇಶ್ ಕುಮಾರ್ ಆದೇಶವನ್ನು ಪ್ರಶ್ನಿಸಿ 17 ಶಾಸಕರು ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಿ ತಿಂಗಳೇ ಕಳೆದಿದೆ.

ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಸರ್ಕಾರವನ್ನು ಬೀಳಿಸಿದ್ದ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್​ನಲ್ಲಿ ಪ್ರತಿ ಬಾರಿಯೂ ಭಾರೀ ಹಿನ್ನಡೆಯಾಗುತ್ತಿದೆ. ಸ್ಪೀಕರ್​​ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ತುರ್ತು ವಿಚಾರಣೆ ಮಾಡಲು ನ್ಯಾಯಲಯವೂ ನಿರಾಕರಿಸಿತ್ತು. ನ್ಯಾಯಲಯದಲ್ಲಿ ಎಲ್ಲಾ ಪ್ರಕರಣಗಳನ್ನು ಸರದಿಯ ಪ್ರಕಾರವೇ ವಿಚಾರಣೆ ನಡೆಸಲಾಗುತ್ತಿದೆ. ನಿಮ್ಮ ಸರದಿ ಬರೆವವರೆಗೂ ಕಾಯಬೇಕು. ನೀವು ಹೇಳಿದಾಗೇ ಅರ್ಜಿ ತುರ್ತು ವಿಚಾರಣೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಎನ್.ವಿ. ರಮಣ ಈ ಹಿಂದೆಯೇ ತಿಳಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ