ವೈಯಕ್ತಿಕವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ ಜನನಾಯಕರು

Varta Mitra News

ಬೆಂಗಳೂರು, ಸೆ.14-ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾಲ್ವರು ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ನಾಯಕರು ಮತ್ತು ವೀಕ್ಷಕರು ವರಿಷ್ಠರಿಗೆ ವರದಿ ನೀಡಿದ್ದು, ಡಾ.ಸುಧಾಕರ್ ಅವರ ಅನರ್ಹತೆಯಿಂದ ತೆರವಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಾಜಿ ಶಾಸಕ ಎಂ.ಸಿ.ಸುಧಾಕರ್, ಆಂಜನಪ್ಪ, ನವೀನ್ ಕಿರಣ್, ಜಗದೀಶ್ ರೆಡ್ಡಿ ಅವರ ಹೆಸರುಗಳು ಪ್ರಸ್ತಾಪವಾಗಿವೆ. ನಾಲ್ಕು ಮಂದಿಯ ಕುರಿತಂತೆ ವೀಕ್ಷಕರು ಸಮಗ್ರ ವರದಿ ನೀಡಿದ್ದಾರೆ.

ಇಂದು ನಡೆದ ಸಭೆಯಲ್ಲಿ ಜನನಾಯಕರುಗಳು ವೈಯಕ್ತಿಕವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಶಿವಶಂಕರ್‍ರೆಡ್ಡಿ ಅವರು, ಅಭ್ಯರ್ಥಿ ಆಯ್ಕೆ ಬಗ್ಗೆ ಸಲಹೆ ನೀಡಿದ್ದೇವೆ. ಪಕ್ಷ ಸಂಘಟನೆಗೆ ಬದಲಾವಣೆಯಾಗಬೇಕಿರುವ ವ್ಯವಸ್ಥೆ ಬಗ್ಗೆಯೂ ಮಾತನಾಡಿದ್ದೇವೆ. ಮುಖಂಡರಾದ ಸಿದ್ದರಾಮಯ್ಯ ಮತ್ತು ದಿನೇಶ್‍ಗುಂಡೂರಾವ್ ಅವರು ಉಪಚುನಾವಣೆ ಗೆಲ್ಲಲೇಬೇಕು.ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅದನ್ನು ಮರೆತು ಒಟ್ಟಾಗಿ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ.ನಾವು ಅದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.
ನಂತರ ಜೆಡಿಎಸ್‍ನ ಶಾಸಕರಾಗಿದ್ದ ನಾರಾಯಣಗೌಡ ಅವರ ರಾಜೀನಾಮೆಯಿಂದ ತೆರವಾದ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಕುರಿತಂತೆ ಚರ್ಚಿಸಲಾಯಿತು.

ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಗಂಗಾಧರ್, ಪುಷ್ಪಾ ಅಮರನಾಥ್, ವೀಕ್ಷಕರಾದ ರಾಣಿ ಸತೀಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಎಚ್.ವಿಶ್ವನಾಥ್ ಅವರ ರಾಜೀನಾಮೆಯಿಂದ ತೆರವಾದ ಹುಣಸೂರು ವಿಧಾನಸಭಾ ಕ್ಷೇತ್ರದ ಕುರಿತು ನಡೆದ ಚರ್ಚೆಯಲ್ಲಿ ಮಾಜಿ ಸಚಿವರಾದ ಎಚ್.ಸಿ.ಮಹದೇವಪ್ಪ, ಶಾಸಕರಾದ ಡಾ.ಯತೀಂದ್ರ, ಅನಿಲ್‍ಚಿಕ್ಕಮಾದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ವಿಜಯ್‍ಕುಮಾರ್, ಪುಷ್ಪಾ ಅಮರ್‍ನಾಥ್ ಮತ್ತಿತರರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ