ಮತ್ತೊಮ್ಮೆ ದೆಹಲಿಗೆ ಬರುವಂತೆ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ

ಬೆಂಗಳೂರು ಸೆ.14-ರಾಜ್ಯದ ವಿರೋಧ ಪಕ್ಷದ ನಾಯಕರ ಆಯ್ಕೆ ವಿಷಯದಲ್ಲಿ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದೆ ಮುಂದಿನ ವಾರ ಮತ್ತೊಮ್ಮೆ ದೆಹಲಿಗೆ ಬರುವಂತೆ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿ ಕಳುಹಿಸಿದೆ.

ಎಐಸಿಸಿ ಕರೆದಿದ್ದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷಗಳ ನಾಯಕರ ಸಭೆಯಲ್ಲಿ ಭಾಗವಹಿಸಲು ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು,ವಿರೋಧ ಪಕ್ಷದ ನಾಯಕನ ಆಯ್ಕೆ ಮತ್ತು ಉಪಚುನಾವಣೆಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚಿಸಲು ಮುಂದಾಗಿದ್ದರು.ಆದರೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಸಮಯಾವಕಾಶವಿಲ್ಲದ ಕಾರಣ ರಾಜ್ಯ ನಾಯಕರನ್ನು ಭೇಟಿಯಾಗಿಲ್ಲ.ನಾಲ್ಕು ದಿನ ದೆಹಲಿಯಲ್ಲೇ ಉಳಿದು ಸೋನಿಯಾಗಾಂಧಿಯವರ ಭೇಟಿಗೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕೊನೆಗೆ ನಿನ್ನೆ ರಾತ್ರಿ ಸಿದ್ದರಾಮಯ್ಯ ಅವರು ಉಪಚುನಾವಣೆಗಳ ಸಭೆ ಇದೆ ಎಂದು ನೆಪ ಹೇಳಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಇಂದು ಸಿದ್ದರಾಮಯ್ಯ ದೆಹಲಿಯಲ್ಲೇ ಉಳಿದಿದ್ದರೆ ಸೋನಿಯಾ ಅವರನ್ನು ಭೇಟಿಯಾಗಲು ಸಮಯ ಸಿಗುತ್ತಿತ್ತು ಎಂದುಹೇಳಲಾಗಿದೆ.ಆದರೆ ನಾಲ್ಕು ದಿನದಿಂದ ಸತತ ಪ್ರಯತ್ನ ನಡೆಸಿ ಬೇಸರಗೊಂಡ ಸಿದ್ದರಾಮಯ್ಯ ಅವರು ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ರಾಹುಲ್‍ಗಾಂಧಿಯವರು ಎಐಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಹೈಕಮಾಂಡ್ ಮಟ್ಟದಲ್ಲಿ ಹೆಚ್ಚಿತ್ತು. ಸೋನಿಯಾಗಾಂಧಿ ಅಧ್ಯಕ್ಷರಾದ ಮೇಲೆ ಪ್ರಭಾವ ಸ್ವಲ್ಪ ತಗ್ಗಿದಂತಾಗಿದೆ.
ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಗಳಾಗಿರುವ ಇತರ ನಾಯಕರು ಏಕಪಕ್ಷೀಯವಾಗಿ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಅಡ್ಡಿಯಾಗಿದ್ದಾರೆ ಎನ್ನಲಾಗಿದೆ.

ರಾಜ್ಯದ ಎಲ್ಲಾ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ಕೊಡಬೇಕು.ಅದರಲ್ಲೂ ಕಾಂಗ್ರೆಸ್ ಮೂಲ ನಿವಾಸಿಗಳಿಗೆ ಮಣೆ ಹಾಕಬೇಕೆಂದು ಸಿದ್ದು ವಿರೋಧಿ ಬಣದ ನಾಯಕರು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಸೋನಿಯಾಗಾಂಧಿಯವರು ನಾಲ್ಕು ದಿನ ಕಾದರೂ ಭೇಟಿಗೆ ಅವಕಾಶ ನೀಡಿಲ್ಲ ಎಂದು ಹೇಳಲಾಗಿದೆ.

ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯ ಹೈಕಮಾಂಡ್‍ಗೆ ಹವಾಲಾ ದುಡ್ಡು ತಲುಪಿಸಿದ ಬಗ್ಗೆ ತಪೆÇ್ಪಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದೆÉ.ಈ ಮೂಲಕ ಕಾಂಗ್ರೆಸ್‍ನ ದೆಹಲಿ ನಾಯಕರನ್ನು ವಿಚಾರಣೆ ನಡೆಸಲು ವ್ಯೂಹ ರಚನೆಯಾಗುತ್ತಿದೆ.ದೆಹಲಿಯ ಎಲ್ಲಾ ನಾಯಕರು ಆ ನಿಟ್ಟಿನಲ್ಲಿ ಟೆನ್ಷನ್‍ನಲ್ಲಿದ್ದು, ಡಿ.ಕೆ.ಶಿವಕುಮಾರ್ ಪ್ರಕರಣದ ಬಗ್ಗೆ ಪ್ರತಿ ಕ್ಷಣದ ಬೆಳವಣಿಗೆಗಳ ಬಗ್ಗೆ ನಿಗಾ ವಹಿಸಿದ್ದಾರೆ ಎನ್ನಲಾಗಿದೆ.

ನಿನ್ನೆ ಮತ್ತೆ ನಾಲ್ಕು ದಿನ ನ್ಯಾಯಾಲಯ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿರುವುದು ಕಾಂಗ್ರೆಸ್‍ನಲ್ಲಿ ಆತಂಕ ಸೃಷ್ಟಿಸಿದೆ.
ಒಂದು ವೇಳೆ ವಿಚಾರಣೆ ಕುಣಿಕೆ ದೆಹಲಿ ನಾಯಕರವರೆಗೂ ಬಂದರೆ ಎಂಬ ಆತಂಕದಲ್ಲೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸಭೆ ಮುಗಿಸಿರುವ ಹೈಕಮಾಂಡ್ ನಾಯಕರು ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆ ಬೇಡ ಒಂದು ವಾರದ ಬಳಿಕ ಚರ್ಚಿಸೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸಿದ್ದರಾಮಯ್ಯ ಅವರು ದೆಹಲಿ ನಾಯಕರಾದ ಅಹಮ್ಮದ್ ಪಟೇಲ್, ಕೆ.ಸಿ.ವೇಣುಗೋಪಾಲ್, ಎ.ಕೆ.ಆ್ಯಂಟನಿ ಅವರುಗಳನ್ನು ಭೇಟಿ ಮಾಡಿ ತಮ್ಮ ವಿಷಯಗಳನ್ನು ಮುಂದಿಟ್ಟು ವಾಪಸ್ಸಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ದೆಹಲಿಗೆ ತೆರಳಿ ಚರ್ಚೆ ನಡೆಸುವ ಸಾಧ್ಯತೆ ಇದೆ.ಸದ್ಯಕ್ಕಂತೂ ವಿರೋಧ ಪಕ್ಷದ ನಾಯಕನ ಆಯ್ಕೆ ಆಗದೆ ಕರ್ನಾಟಕದಲ್ಲಿ ಸರ್ಕಾರವನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ