ಮನೆ ಮನೆಗೆ `ಎಣ್ಣೆ’ : ಮಹಿಳೆಯರ ಕ್ಷಮೆ ಕೋರಿದ ಸಚಿವ ನಾಗೇಶ್

ಬೆಂಗಳೂರು: ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡುವ ವಿಚಾರದ ಕುರಿತು ಅಬಕಾರಿ ಸಚಿವ ನಾಗೇಶ್ ಅವರು ಇದೀಗ ಮಹಿಳೆಯ ಬಳಿ ಕ್ಷಮೆ ಕೋರಿದ್ದಾರೆ.

ಈ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮನೆಮನೆಗೆ ಮದ್ಯಪಾನ ಪೂರೈಕೆ ನಿರ್ಧಾರವನ್ನು ಸರ್ಕಾರ ಕೈ ಬಿಟ್ಟಿದೆ. ಸರ್ಕಾರ ಯಾವುದೇ ಆದೇಶ ಹೊರಡಿಸಿರಲಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಿನ್ನೆ ಕೊಟ್ಟಂತಹ ಹೇಳಿಕೆಯನ್ನು ವಾಪಸ್ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಸಭೆಯ ವೇಳೆ ಮಾತನಾಡುವಾಗ ತಪ್ಪಾಗಿದೆ. ಆದರೆ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ. ಮದ್ಯ ಪೂರೈಕೆ ವಿಚಾರದಿಂದ ಮಹಿಳೆಯರಿಗೆ ಬೇಸರವಾಗಿದ್ದು, ಅವರ ಬಳಿ ಕ್ಷಮೆಯಾಚಿಸುವುದಾಗಿ ತಿಳಿಸಿದರು.

ಮನೆ ಮನೆಗೆ ಮದ್ಯ ಅನ್ನೋ ಪರಿಕಲ್ಪನೆಯೇ ಇಲ್ಲ. ನಿನ್ನೆ ಸಭೆಯಲ್ಲಿ ಹಿಂದೆ ಗುಜರಾತ್ ಮತ್ತು ಬೇರೆ ಕಡೆಗಳಲ್ಲಿ ಇತ್ತು ಎಂಬ ವಿಚಾರವನ್ನು ಮಾತ್ರ ಪ್ರಸ್ತಾಪ ಮಾಡಿದ್ದೆ. ಮತ್ತು ಮಾತನಾಡಿದ ಸಂದರ್ಭದಲ್ಲಿ ಮಿಸ್ಟೇಕ್ ಆಗಿದೆ. ಒಂದು ವೇಳೆ ಇಂತಹ ನೀತಿ ಬಂದರೆ ಹೆಣ್ಣುಮಕ್ಕಳಿಗೆ ಕಷ್ಟವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಸಚಿವರು, ಗುಣಮಟ್ಟದ ಮದ್ಯ ಕೊಡಬೇಕು ಎನ್ನುವುದು ನಮ್ಮ ಉದ್ದೇಶ. 2018-19 ರಲ್ಲಿ 19,750 ಸಾವಿರ ಕೋಟಿ ರೂ ಸಂಗ್ರಹ ಗುರಿ ನಿಗದಿ ಪಡಿಸಲಾಗಿತ್ತು. 19,943 ಕೋಟಿ ಗುರಿ ಸಾಧಿಸಿದ್ದೇವೆ. 2019-20 ನೇ ಸಾಲಿನಲ್ಲಿ 21 ಸಾವಿರ ಕೋಟಿ ಗುರಿ ನಿಗದಿ ಪಡಿಸಿದ್ದೇವೆ.

ಪಾರ್ಟಿಗಳಲ್ಲಿ ಬೇರೆ ಕಡೆಯಿಂದ ಮದ್ಯ ತಂದು ಉಪಯೋಗಿಸುತ್ತಾರೆ. ಹೀಗಾಗಿ ಈ ರೀತಿಯ ಪಾರ್ಟಿಗಳ ಮೇಲೆ ನಮ್ಮ ಅಧಿಕಾರಿಗಳು ದಾಳಿ ಮಾಡುತ್ತಾರೆ. ಗಾಂಜಾ ಮತ್ತು ಮಾದಕವಸ್ತುಗಳ ಬಳಕೆಗೆ ಕಡಿವಾಣ ಹಾಕುತ್ತೇವೆ ಎಂದು ಹೇಳಿದ್ದರು.

ಮದ್ಯಪಾನ ನಿಷೇಧದ ಬಗ್ಗೆ ಸರ್ಕಾರದ ಮುಂದೆ ಯಾವುದೇ ಚಿಂತನೆ ಇಲ್ಲ. ಈ ಹಿಂದೆ ಮಹಿಳೆಯರು ಪ್ರತಿಭಟನೆ ಮಾಡಿದ್ದು ನನಗೆ ಗೊತ್ತಿಲ್ಲ. ನಾನು ಬಹುಶಃ ಬಾಂಬೆಯಲ್ಲಿದ್ದೆ. ಆಗ ನನ್ನ ಫೋನ್ ಸ್ವಿಚ್ ಆಫ್ ಇತ್ತು ಎಂದು ಹೇಳಿದ್ದರು. ಇದೇ ವೇಳೆ ಡಿಕೆಶಿ ಬಗ್ಗೆ ಕೇಳಿದಾಗ, ಈ ಬಗ್ಗೆ ಸಿಎಂ ಆಗಲೇ ಮೂವರು ಸಚಿವರಿಗೆ ಹೇಳಿಕೆ ಕೊಡದಂತೆ ವಾರ್ನ್ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ನಾನೇನು ಹೇಳಲ್ಲ ಎಂದು ತಿಳಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ