ಬೆಂಗಳೂರು, ಸೆ.1-ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಅಮೂಲ್ಯ ಪರಿಸರ ಸಂಪತ್ತನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕೆಂದು ಮೇಯರ್ ಗಂಗಾಂಬಿಕೆ ಸಲಹೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪರಿಸರ ಜಾಗೃತಿ ರಸ್ತೆ ಓಟಮತ್ತು ಪರಿಸರ ಸ್ನೇಹಿ ಬೀದಿ ನಾಟಕ ಹಾಗೂ ಉಚಿತವಾಗಿ 501ಮಣ್ಣಿನ ಗಣೇಶ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಣೇಶ ಹಬ್ಬವನ್ನು ಅಚರಣೆ ಮಾಡುವ ವಿಧಾನ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಬ್ಬವನ್ನು ಹೇಗೆ ಅಚರಿಸಬೇಕು ಎಂಬ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದೆ. 2016ರಲ್ಲಿ ಪರಿಸರ ಮಾಲಿನ್ಯ ಮಂಡಳಿಯಿಂದ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಟಾಪನೆ ಮತ್ತು ವಿಸರ್ಜನೆಯನ್ನು ನಿಷೇಧಿಸಲಾಗಿದೆ. ಇದನ್ನು ಬಿಬಿಎಂಪಿಯಿಂದ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಹೇಳಿದರು.
ಪಾಲಿಕೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸಿದರೆ ಪರಿಸರ ಸ್ವಚ್ಛವಾಗಲಿದೆ ಎಂದು ತಿಳಿಸಿದರು.
ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ಮಾತನಾಡಿ, ಗೌರಿ ಗಣೇಶ ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಣೆ ಮಾಡಬೇಕೆಂದು ಮನವಿ ಮಾಡಿದರು.
ಬೆಂಗಳೂರಿನ ಹಲವಾರು ಕಡೆ ಗಣೇಶ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿದೆ.ಅಲ್ಲಿ ದೀಪದ ವ್ಯವಸ್ಥೆ, ಸಿ.ಸಿ.ಕ್ಯಾಮರಾ ಅಳವಡಿಕೆ ಹಾಗೂ ಈಜುಗಾರರು ಇರುತ್ತಾರೆ. ಮಹಿಳೆಯರು, ಯುವಕರು, ಮಕ್ಕಳು ಅವರ ಸಹಾಯ ಪಡೆದು ವಿಸರ್ಜನೆ ಮಾಡಿ. ಜಾಗೃತಿಯಿಂದ ಗಣೇಶ ಹಬ್ಬ ಅಚರಣೆ ಮಾಡಿ ಎಂದು ಹೇಳಿದರು.
ಉಪಮಹಾಪೌರರಾದ ಭದ್ರೇಗೌಡರು ಮಾತನಾಡಿ ಪರಿಸರ ಉಳಿವಿಗಾಗಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆ ಮಾಡೋಣ, ಮುಂದಿನ ಜನಾಂಗಕ್ಕೆ ಪರಿಸರವನ್ನು ಉಳಿಸೋಣ ಎಂದು ಹೇಳಿದರು.
ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಸಂಘದ ಅಧ್ಯಕ್ಷ ಅಮೃತ್ ರಾಜ್, ಪ್ರಧಾನ ಕಾರ್ಯದರ್ಶಿ ನಲ್ಲಪ್ಪ, ಹೆಚ್.ವಿ.ಅಶ್ವತ್ಥ, ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳಾದ ಡಿ.ಗಂಗಾರ್ದ ,ಡಿ.ರಾಮಚಂದ್ರ ,ಕೆ.ಮಂಜೇಗೌಡ, ಹೆಚ್.ನಂಜಪ್ಪ, ಕೆ.ನರಸಿಂಹ ,ಸಂತೋಷ್ ಕುಮಾರ್ ನಾಯಕ್ ,ರೇಣುಕಾ ಉಪಸ್ಥಿತರಿದ್ದರು.