ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಟಿ.ನರಸೀಪುರ, ಸೆ.1- ಪ್ರವಾಹ ಪೀಡಿತ ಸಂತ್ರಸ್ತರಿಗೆ ಶಾಶ್ವತ ಯೋಜನೆಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಹಶೀಲ್ದಾರ್ ಅವರಿಗೆ ಸೂಚಿಸಿದ್ದಾರೆ.

ಪಟ್ಟಣದ ತಿರಮಕೂಡಲಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರವಾಹ ಆಗಿಂದಾಗ್ಗೆ ಬರುವುದರಿಂದ ತಾತ್ಕಾಲಿಕ ಸ್ಥಳಾಂತರ ಅಷ್ಟು ಉಪಯೋಗವಾಗುವುದಿಲ್ಲ. ಅದರ ಬದಲು ಮನೆ ಕಳೆದುಕೊಂಡವರಿಗೆ ಕೂಡಲೇ ಪರ್ಯಾಯ ನಿವೇಶನದಲ್ಲಿ ಮನೆ ನಿರ್ಮಿಸಿಕೊಡಲು ಯೋಜನೆ ರೂಪಿಸಬೇಕು.ಪ್ರಸ್ತುತ ಪರ್ಯಾಯ ವ್ಯವಸ್ಥೆ ಆಗುವವವರೆವಿಗೂ ತಾತ್ಕಲಿಕ ಶೆಡ್ ನಿರ್ಮಿಸಬೇಕು.ಇದು ಸಾಧ್ಯವಾಗದಿದ್ದಲ್ಲಿ ಅವರಿಗೆ ತಾಲ್ಲೂಕು ಆಡಳಿತ ತಲಾ 5 ಸಾವಿರ ರೂ.ನೀಡಬೇಕು ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಬಂಗಾರಪ್ಪ ಬಡಾವಣೆಯಲ್ಲಿರುವ 29 ಎಕರೆ ಪ್ರದೇಶವನ್ನು ಸರ್ವೆ ಮಾಡಿಸಿ ಬೌಂಡರಿ ನಿಗದಿಪಡಿಸಿ. ಈ ಬಡಾವಣೆಯಲ್ಲಿ ಈ ಹಿಂದೆ 200 ಮಂದಿಗೆ ಹಕ್ಕುಪತ್ರ ನೀಡಲಾಗಿತ್ತು.ಅದರಲ್ಲೂ ನಕಲು ಸೃಷ್ಟಿಯಾಗಿರುವ ಮಾಹಿತಿ ಇದೆ. ನಕಲನ್ನು ತಡೆಗಟ್ಟಬೇಕಿದೆ ಎಂದರು.

ಆಲಗೂಡು, ಬೈರಾಪುರ ಪಂಚಾಯಿತಿಗಳು ಪುರಸಭೆ ಸೇರಿರುವುದರಿಂದ ಹೊಸ ಬಡಾವಣೆ ನಿರ್ಮಿಸಲು ಈ ಪ್ರದೇಶವನ್ನು ತಹಶೀಲ್ದಾರ್, ಪುರಸಭಾ ಮುಖ್ಯಾಧಿಕಾರಿ ಹಾಗೂ ತಾ.ಪಂ ಇಓ ಸೇರಿ ಪರಿಶೀಲಿಸಿ ಬೌಂಡರಿ ನಿಗದಿಪಡಿಸುವಂತೆ ಸೂಚಿಸಿದರು.

ಶಿಷ್ಟಾಚಾರ ಉಲ್ಲಂಘಿಸಿದರೆ ಕ್ರಮ :
ಇದೇ ವೇಳೆ ತಾಲ್ಲೂಕಿನ ಹಲವಾರು ಸರ್ಕಾರಿ ಕಾರ್ಯಕ್ರಮಗಳಲ್ಲಿ ತಾಲ್ಲೂಕು ಆಡಳಿತ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದೆ. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡುವುದಿಲ್ಲ ಎಂದು ಮುಖಂಡರು ಆರೋಪಿಸಿದ ವೇಳೆ ಸಿದ್ದರಾಮಯ್ಯ ಅವರು ತಹಶೀಲ್ದಾರ್ ಪಿ.ಎನ್.ನಾಗಪ್ರಶಾಂತ್ ಅವರಿಗೆ ಶಿಷ್ಠಾಚಾರ ಪಾಲನೆ ಮಾಡುವಂತೆ ಸೂಚಿಸಿ, ಅದನ್ನು ಉಲ್ಲಂಘನೆ ಮಾಡಿದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿ, ಎಲ್ಲ ಅಧಿಕಾರಿಗಳು ಶಿಷ್ಠಾಚಾರ ಪಾಲನೆ ಮಾಡುವಂತೆ ತಿಳಿಸಿದರು.

ಮಾಜಿ ಸಂಸದ ಆರ್.ದ್ರುವನಾರಯಣ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಪುಷ್ಪ ಅಮರನಾಥ್, ಜಿ.ಪಂ. ಸದಸ್ಯ ಟಿ.ಹೆಚ್.ಮಂಜುನಾಥ್, ತಾಪಂ ಅಧ್ಯಕ್ಷ ಆರ್.ಚಲುವರಾಜ್, ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಪುರಸಭೆ ಸದಸ್ಯರಾದ ಸಿ.ಪ್ರಕಾಶ್, ಸಯ್ಯದ್ ಆಹ್ಮದ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ