ಬೆಂಗಳೂರು,ಆ.31- ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಸೇಂಟ್ ಜಾನ್ಸ್ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ತನ್ನ ಸುಮಾರು 7000 ಸಿಬ್ಬಂದಿಗೆ ಹೈಕೋರ್ಟ್ ಹಾಗೂ ಕೈಗಾರಿಕಾ ನ್ಯಾಯಮಂಡಳಿ ಆದೇಶದಂತೆ ನ್ಯಾಯಯುತ ವೇತನ ನೀಡದೆ ವಂಚನೆ ಎಸಗುತ್ತಿದೆ ಎಂದು ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ಸ್ ಆಫ್ ಎಂಪ್ಲಾಯಿಸ್ ಸ್ಟಾಫ್ ಅಸೋಸಿಯೇಷನ್ ಅಧ್ಯಕ್ಷ ಸಾವಿಯೊ ಪೆರೈರಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆ 1985ರಿಂದಲೂ ನ್ಯಾಯಾಲಯದ ಆದೇಶದಂತೆ ಕನಿಷ್ಠ ವೇತನಕ್ಕೂ ಕಡಿಮೆ ಸಂಬಳವನ್ನು ನೀಡುವ ಮೂಲಕ ಸಿಬ್ಬಂದಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿರುವ ವೇತನವನ್ನು ನೀಡದೆ ಆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
1974ರಿಂದ 1984 ವರೆಗೆ ಸಂಸ್ಥೆಯ ಸಿಬ್ಬಂದಿಗೆ ಸರ್ಕಾರ ನಿಗದಿಪಡಿಸಿದ್ದ ವೇತನಗಳನ್ನು ನೀಡಲಾಗುತ್ತಿತ್ತು.1985ರಲ್ಲಿ ಅದನ್ನು ಸ್ಥಗಿತಗೊಳಿಸಿ ಕನಿಷ್ಠ ವೇತನಕ್ಕಿಂತಲೂ ಕಡಿಮೆ ವೇತನವನ್ನು ನೀಡಲಾರಂಭಿಸಿತು.ಇದರಿಂದಾಗಿ ಕೈಗಾರಿಕಾ ವ್ಯಾಜ್ಯ ಏರ್ಪಟ್ಟು, ಧರಣಿ ಮುಷ್ಕರಗಳು ನಡೆದಿದ್ದವು.ಆಗ ವ್ಯಾಜ್ಯ ಕೈಗಾರಿಕಾ ನ್ಯಾಯಮಂಡಳಿ ಮೆಟ್ಟಿಲೇರಿತ್ತು ಎಂದು ತಿಳಿಸಿದರು.
ನ್ಯಾಯಮಂಡಳಿ ಹಾಗೂ ಹೈಕೋರ್ಟ್ ಆದೇಶಗಳನ್ನು ಧಿಕ್ಕರಿಸಿ, ಸಿಬ್ಬಂದಿ ನೌಕರರಿಗೆ ನೀಡಬೇಕಾದ ವೇತನವನ್ನು ನೀಡದೆ, ಕೋಟ್ಯಾಂತರ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಆ ಮೂಲಕ ಸಿಬ್ಬಂದಿಗೆ ವಂಚನೆ ಎಸಗಿದೆ. ಹಾಗಾಗಿ ಕೋರ್ಟ್ ಆದೇಶದಂತೆ ಕೂಡಲೇ ಸಂಸ್ಥೆ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕೆಂದು ಸಾವಿಯೊ ಪೆರೈರಾ ಒತ್ತಾಯಿಸಿದರು.