ಪಾಕಿಸ್ತಾನಕ್ಕೆ ಏಷಿಯಾ ಫೆಸಿಪಿಕ್ ಸಮೂಹದಿಂದ ಬ್ಲಾಕ್‍ಲಿಸ್ಟ್ ಆತಂಕ

ಕ್ಯಾನಬೇರಾ/ಇಸ್ಲಾಮಾಬಾದ್, ಆ.23- ಉಗ್ರಗಾಮಿಗಳು ಮತ್ತು ಭಯೋತ್ಪಾದನೆ ಸಂಘಟನೆಗಳ ವಿರುದ್ಧ ನಿರೀಕ್ಷಿತ ಮಟ್ಟದಲ್ಲಿ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿರುವ ಪಾಕಿಸ್ತಾನಕ್ಕೆ ಈಗ ಏಷಿಯಾ ಫೆಸಿಪಿಕ್ ಸಮೂಹ (ಎಪಿಜಿ)ದಿಂದ ಬ್ಲಾಕ್‍ಲಿಸ್ಟ್ ಆತಂಕ ಎದುರಾಗಿದೆ.

ಉಗ್ರರು ಮತ್ತು ಉಗ್ರಗಾಮಿ ಬಣಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡು ಈ ಪಿಡುಗನ್ನು ಹತ್ತಿಕ್ಕಲು ಈ ಸಂಬಂಧ ಪಾಕಿಸ್ತಾನಕ್ಕೆ ನೀಡಿದ್ದ ಗಡುವು ಮುಗಿಯುತ್ತಾ ಬಂದಿದೆ. ಅಷ್ಟಾದರೂ ಪಾಕಿಸ್ತಾನದ ನಿಷ್ಕ್ರಿಯ ಎಪಿಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಆಸ್ಟ್ರೇಲಿಯಾದ ಕ್ಯಾನಬೇರಾದಲ್ಲಿ ನಿನ್ನೆ ನಡೆದ ಈ ಸಮೂಹದ ಹಣಕಾಸು ಕ್ರಿಯಾಕಾರ್ಯಪಡೆ(ಎಫ್‍ಎಟಿಎಫ್)ಯ ಮಹತ್ವದ ಸಭೆಯಲ್ಲಿ ಪಾಕಿಸ್ತಾನದ ನಿಷ್ಕ್ರಿಯತೆ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು.

ಪಾಕಿಸ್ತಾನಕ್ಕೆ ಈ ಸಂಬಂಧ ಈಗ ವಿಧಿಸಲಾಗಿರುವ ಗ್ರೇ ಲಿಸ್ಟ್ (ಬೂದುಪಟ್ಟಿ) ಮುಂದುವರಿಸಬೇಕೆ ಅಥವಾ ಈ ದೇಶವನ್ನು ಕಪ್ಪುಪಟ್ಟಿಗೆ ಸೇರಿಸಬೇಕೆ ಎಂಬ ಬಗ್ಗೆ ಏಷಿಯಾ ಫೆಸಿಪಿಕ್ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಚರ್ಚಿಸಿದರು.

ಬಹುತೇಕ ಮಂದಿ ಪಾಕಿಸ್ತಾನಕ್ಕೆ ಬುದ್ಧಿ ಬರಬೇಕಾದರೆ ಅದನ್ನು ಬ್ಲಾಕ್‍ಲಿಸ್ಟ್‍ಗೆ ಸೇರಿಸುವುದು ಸೂಕ್ತ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದಕರಿಗೆ ಹಣಕಾಸು ನೆರವು, ಉಗ್ರಗಾಮಿಗಳಿಗೆ ಕುಮ್ಮಕ್ಕು, ಅವರಿಗೆ ಆಶ್ರಯ ಸೇರಿದಂತೆ ವಿವಿಧ ಆರೋಪಗಳಿಗೆ ಗುರಿಯಾಗಿರುವ ಪಾಕಿಸ್ತಾನ ತಾನು ಈವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಎಪಿಜಿ ಮತ್ತು ಎಫ್‍ಎಟಿಎಫ್‍ಗೆ ಸಲ್ಲಿಸಿದ ವರದಿಗಳು ಸದಸ್ಯ ರಾಷ್ಟ್ರಗಳಿಗೆ ತೃಪ್ತಿಯಾಗಿಲ್ಲ.

ಈ ಎಲ್ಲ ಕಾರಣಗಳಿಂದ ಸೆಪ್ಟೆಂಬರ್‍ನಿಂದ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವ ಸಾಧ್ಯತೆಯಿದ್ದು, ಈಗಾಗಲೇ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಯೋತ್ಪಾದನೆ ಮತ್ತು ಕಾಶ್ಮೀರ ವಿಷಯದಲ್ಲಿ ಮುಖಭಂಗಕ್ಕೆ ಒಳಗಾಗಿರುವ ಪಾಕಿಸ್ತಾನಕ್ಕೆ ಇದು ಮತ್ತೊಂದು ಸಂಕಷ್ಟಕ್ಕೆ ಕಾರಣವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ