ಬೆಂಗಳೂರು: ಬಿಜೆಪಿ ಸರ್ಕಾರದ ಮೊದಲ ಸಚಿವ ಸಂಪುಟ ರಚನೆಯಾದ ದಿನದಿಂದ ಪಕ್ಷದೊಳಗೆ ದೊಡ್ಡ ಮಟ್ಟದ ಅಸಮಾಧಾನವೊಂದು ಹೊಗೆಯಾಡುತ್ತಲೇ ಇದೆ. ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡದೆ ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಬೆಳಗಾವಿ ಜಿಲ್ಲಾ ರಾಜಕೀಯದಲ್ಲೂ ಭಿನ್ನಮತಕ್ಕೆ ಕಾರಣವಾಗಿದೆ. ಪರಿಣಾಮ ಹೈಕಮಾಂಡ್ ಸೂಚನೆಯಂತೆ ಲಕ್ಷ್ಮಣ ಸವದಿ ಹಾಗೂ ಉಮೇಶ್ ಕತ್ತಿ ನಡುವೆ ರಾಜೀ ಸಂಧಾನ ಮಾಡಲು ಸ್ವತಃ ಬಿ.ಎಸ್. ಯಡಿಯೂರಪ್ಪ ಮುಂದಾದಂತೆ ಕಾಣುತ್ತಿದೆ.
ಬೆಳಗಾವಿ ರಾಜಕಾರಣಕ್ಕೆ ತಕ್ಕಮಟ್ಟಿಗೆ ಉಮೇಶ್ ಕತ್ತಿ ಹಾಗೂ ಲಕ್ಷ್ಮಣ ಸವದಿ ಬಿಜೆಪಿ ಪಕ್ಷದ ಪ್ರಮುಖ ಬೇರುಗಳು. ಹೀಗಾಗಿ ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಉಮೇಶ್ ಕತ್ತಿಗೆ ಸಚಿವ ಸ್ಥಾನ ಖಾಯಂ ಎಂದೇ ಭಾವಿಸಲಾಗಿತ್ತು. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಒಲಿದು ಬಂದಿತ್ತು. ಇದು ಸಾಮಾನ್ಯವಾಗಿ ಕತ್ತಿಯನ್ನು ಕೆರಳಿಸಿತ್ತು. ಪರಿಣಾಮ ಮೈತ್ರಿ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ನಿರ್ವಹಿಸಿದ್ದ ಪಾತ್ರವನ್ನೇ ಬಿಜೆಪಿ ಸರ್ಕಾರದಲ್ಲಿ ತಾನು ನಿರ್ವಹಿಸುವ ಎಲ್ಲಾ ಸೂಚನೆಗಳನ್ನು ಉಮೇಶ್ ಕತ್ತಿ ನೀಡಿದ್ದರು.
ಪರಿಸ್ಥಿತಿ ಕೈಮೀರುವ ಮುನ್ನ ಇಬ್ಬರೂ ನಾಯಕರ ನಡುವೆ ರಾಜೀ ಸಂಧಾನ ಮಾಡಿಸುವಂತೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಸೂಚಿಸಿದೆ. ಪರಿಣಾಮ ಇಂದು ಉಮೇಶ್ ಕತ್ತಿ ಹಾಗೂ ಲಕ್ಷ್ಮಣ ಸವದಿ ಇಬ್ಬರನ್ನೂ ಸಿಎಂ ಬಿಎಸ್ವೈ ಇಂದು ತನ್ನ ಮನೆಗೆ ಕರೆಸಿಕೊಂಡಿದ್ದಾರೆ. ಇಬ್ಬರೂ ನಾಯಕರನ್ನು ಮುಖಾಮುಖಿ ಕೂರಿಸಿ ಸಂಧಾನ ಮಾಡಿಸಲಿದ್ದಾರೆ. ಲಕ್ಷ್ಮಣ್ ಸವದಿಗೆ ಯಾಕೆ ಸಚಿವ ಸ್ಥಾನ ಕೊಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯ್ತು ಎಂಬುದರ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ. ಈ ರಾಜೀ ಸಂಧಾನಕ್ಕೆ ಸಚಿವ ಆರ್. ಅಶೋಕ್ ಸಹ ಸಾಕ್ಷಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಅನರ್ಹ ಶಾಸಕರಿಗೆ ಬಿಜೆಪಿ ಸಚಿವ ಸ್ಥಾನ ನೀಡುವುದು ಬಹುತೇಕ ಅನಿಶ್ಚಿತವಾಗಿದ್ದು, ಉಮೇಶ್ ಕತ್ತಿಗೂ ಭವಿಷ್ಯದಲ್ಲಿ ಸ್ಥಾನ ಸಿಕ್ಕರೆ ಆಶ್ಚರ್ಯವಿಲ್ಲ. ಹೀಗಾಗಿ ಇಂದಿನ ಸಂಧಾನ ಸಭೆಯಲ್ಲಿ ಕತ್ತಿ ಬಿಎಸ್ವೈ ಮಾತಿಗೆ ಬೆಲೆಕೊಟ್ಟು ಸಮಾಧಾನವಾದರೂ ಅಚ್ಚರಿ ಇಲ್ಲ.