ಅಂಗೈ ಹುಣ್ಣಿಗೆ ಕನ್ನಡಿ ಏಕೆ ಬೇಕು-ಜೆಡಿಎಸ್ ಶಾಸಕ ಸುರೇಶ್‍ಗೌಡ

ಮಂಡ್ಯ,ಆ.23- ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಮಧ್ಯಂತರ ಚುನಾವಣೆಗೆ ಸಿದ್ಧವಾಗುವುದು ಒಳ್ಳೆಯದು ಎಂದು ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್‍ಗೌಡ ತಿಳಿಸಿದ್ದಾರೆ.

ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಂತರ ಚುನಾವಣೆಗೆ ಸಿದ್ದರಾಗುವಂತೆ ಈಗಾಗಲೇ ನಮ್ಮ ವರಿಷ್ಠರು ಸೂಚನೆ ನೀಡಿದ್ದಾರೆ ಎಂದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಣ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ಅಂಗೈ ಹುಣ್ಣಿಗೆ ಕನ್ನಡಿ ಏಕೆ ಬೇಕು ಎಂದರು.

ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲೇ ಕಾಂಗ್ರೆಸ್ ಜತೆ ಹೋಗುವುದು ಬೇಡ ಎಂದು ತಮ್ಮ ಪಕ್ಷದ ವರಿಷ್ಠರಿಗೆ ಹೇಳಿದ್ದೆ. ಆದರೆ, ಅವರು ಜಾತ್ಯತೀತ ತತ್ವದ ಮೇಲೆ ಕಾಂಗ್ರೆಸ್‍ನೊಂದಿಗೆ ಸರ್ಕಾರ ರಚಿಸುವ ತೀರ್ಮಾನ ಕೈಗೊಂಡಿದ್ದರು.

ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‍ಗೆ ಪ್ರಬಲ ಪೈಪೋಟಿ ಇರುವುದೇ ಕಾಂಗ್ರೆಸ್‍ನಿಂದ. ಅಂದು ನಾನು ಹೇಳಿದ್ದು ಈಗ ನಮ್ಮ ಪಕ್ಷದ ವರಿಷ್ಠರಿಗೆ ಸರಿ ಅನ್ನಿಸಿರಬಹುದು ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರನ್ನು ಬಿಜೆಪಿಗೆ ಸೇರುವಂತೆ ಆಹ್ವಾನಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಯವರು ನನ್ನನ್ನು ಬಿಟ್ಟಿರುತ್ತಾರೆಯೇ ಎಂದು ಬಿಜೆಪಿಯಿಂದ ನಿಮಗೆ ಆಹ್ವಾನ ಬಂದಿತ್ತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಮೈತ್ರಿ ಸರ್ಕಾರ ಪತನವಾದ ನಂತರ ನಾವು ಬಿಜೆಪಿಗೆ ಹೋಗಿದ್ದರೆ ಚೆನ್ನಾಗಿರುತ್ತಿತ್ತೇನೋ ಅನ್ನಿಸಿತ್ತು. ಆದರೆ, ಅನರ್ಹ ಶಾಸಕರ ವಿಚಾರದ ಬಗ್ಗೆ ಗಮನ ಹರಿಸಿದಾಗ ನಾವು ತೆಗೆದುಕೊಂಡ ನಿರ್ಧಾರವೇ ಸರಿ ಎಂದೆನಿಸಿದೆ.

ಅನರ್ಹಗೊಂಡ 24 ಗಂಟೆಯಲ್ಲೇ ಸುಪ್ರೀಂಕೋರ್ಟ್‍ನಿಂದ ತಡೆ ಸಿಗುತ್ತದೆ ಎಂಬ ಭರವಸೆ ನೀಡಲಾಗಿತ್ತು. ಆದರೆ, 24 ದಿನ ಕಳೆದರೂ ವಿಧಾನಸಭಾಧ್ಯಕ್ಷರು ಶಾಸಕ ಸ್ಥಾನದಿಂದ ಅನರ್ಹಗೊಳಸಿರುವುದಕ್ಕೆ ತಡೆ ಸಿಕ್ಕಿಲ್ಲ. ಹೀಗಾಗಿ ನಾವು ಬಿಜೆಪಿಗೆ ಹೋಗದಿರುವುದೇ ಸರಿ ಎನಿಸಿದೆ ಎಂದರು.

ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಗ್ಗೆ ಮಾತನಾಡಿರುವುದು ಆರಂಭದ ಶೂರತ್ವವಾಗಿದೆ ಎಂದು ಟೀಕಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ