ಶಾಂತ ರೀತಿಯಲ್ಲಿ ರಾತ್ರಿ ಕಳೆದ ಪಿ.ಚಿದಂಬರಂ

ನವದೆಹಲಿ, ಆ.22-ಐಎನ್‍ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ನಿನ್ನೆ ಬಂಧಿತರಾದ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಧುರೀಣ ಪಿ.ಚಿದಂಬರಂ ಕೇಂದ್ರೀಯ ತನಿಖಾ ದಳ(ಸಿಬಿಐ) ಅತಿಥಿ ಗೃಹದಲ್ಲಿ ಶಾಂತ ರೀತಿಯಲ್ಲಿ ರಾತ್ರಿ ಕಳೆದರು.

73 ವರ್ಷದ ಚಿದಂಬರಂ ಅವರನ್ನು ಗೆಸ್ಟ್ ಹೌಸ್‍ನ ನೆಲ ಮಹಡಿಯ ಸೂಟ್ ನಂ.5ರಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಇರಿಸಲಾಗಿತ್ತು. ಅವರ ಮೇಲೆ ಭದ್ರತಾ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದರು.

ನಿನ್ನೆ ರಾತ್ರಿ ಚಿದು ಅವರನ್ನು ಬಂಧಿಸಿದ ನಂತರ 10 ಗಂಟೆಗೆ ಸಿಬಿಐ ಅತಿಥಿ ಗೃಹಕ್ಕೆ ಕರೆತರಲಾಯಿತು. ಬಳಿಕ ದೆಹಲಿಯ ರಾಮ್‍ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯರು ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಅವರ ಆರೋಗ್ಯ ಉತ್ತಮವಾಗಿರುವುದು ದೃಢಪಟ್ಟ ತರುವಾಯ ಅವರನ್ನು ಕೊಠಡಿಯಲ್ಲಿ ಇರಿಸಲಾಯಿತು.

ಸಿಬಿಐ ಅಧಿಕಾರಿಗಳು ಕೇಳಿದ ಕೆಲವು ಪ್ರಶ್ನೆಗಳಿಗೆ ನಿರಾಳತೆಯಿಂದ ಉತ್ತರಿಸಿದ ಅವರು ಶಾಂತ ರೀತಿಯಲ್ಲಿ ರಾತ್ರಿ ಕಳೆದರೆಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ