ತುರ್ತು ಸಂದರ್ಭದಲ್ಲಿ ನೀರಿನ ಖರೀದಿ ಹೇಗೆ?-ಜನ ಸಾಮಾನ್ಯರನ್ನು ಕಾಡುತ್ತಿರುವ ಆತಂಕ

ನವದೆಹಲಿ, ಆ.22- ಇನ್ನು ಮುಂದೆ ರೈಲ್ವೆ ನಿಲ್ಧಾಣದಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ದೊರೆಯುವುದಿಲ್ಲವೇ..?

ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಲ್ಲಿ ಆತಂಕ ಕಾಡಲಾರಂಭಿಸಿದೆ. ರೈಲ್ವೆ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಮಹಾತ್ಮ ಗಾಂಧೀಜಿ ಜನ್ಮದಿನ ಅಕ್ಟೋಬರ್ 2ರಿಂದ ರೈಲ್ವೆ ಇಲಾಖೆ ಏಕಬಳಕೆಯ ಪ್ಲಾಸ್ಟಿಕ್‍ನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಒಮ್ಮೆ ಬಳಸಿ ಬೀಸಾಕುವ ಹಾಗೂ 50ಮೈಕ್ರಾನ್‍ಕ್ಕಿಂತ ತೆಳುವಾದ ಪ್ಲಾಸ್ಟಿಕ್‍ಗಳನ್ನು ಬಳಸುವಂತಿಲ್ಲ. ಈ ಆದೇಶದ ಪ್ರಕಾರ ಪ್ಲಾಸ್ಟಿಕ್ ಗ್ಲಾಸ್, ಫೈಲ್ಸ್, ಪೋಲ್ಡರ್ಸ್, ಬಾಟಲ್, ಕಪ್‍ಗಳು ಹಾಗೂ ಇತರೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವಂತಿಲ್ಲ.

ಸಾಮಾನ್ಯವಾಗಿ ಎಲ್ಲೆಡೆ ಕುಡಿಯುವ ಬಳಸಿ ಬೀಸಾಡುವಂತಹ ಪ್ಲಾಸ್ಟಿಕ್ ಬಾಟಲ್‍ನಲ್ಲೇ ನೀರು ಪೂರೈಸಲಾಗುತ್ತಿದೆ. ಹೊಸ ಸುತ್ತೋಲೆಯ ಪ್ರಕಾರ ಪ್ಲಾಸ್ಟಿಕ್ ಬಾಟಲ್‍ಗಳನ್ನು ಬಳಸುವಂತಿಲ್ಲ, ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವುದು ಹೇಗೆ..? ತುರ್ತು ಸಂದರ್ಭದಲ್ಲಿ ನೀರಿನ ಖರೀದಿ ಹೇಗೆ? ಎಂಬೆಲ್ಲ ಆತಂಕ ಜನ ಸಾಮಾನ್ಯರನ್ನು ಕಾಡುತ್ತಿದೆ.

ಅಗತ್ಯ ವಸ್ತುಗಳು ಹಾಗೂ ಇತರ ಸರಕುಗಳನ್ನು ತೆಗೆದುಕೊಂಡು ಹೋಗಲು ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಬಟ್ಟೆ ಚೀಲ ಹಾಗೂ ಇತರ ಸೌಲಭ್ಯಗಳಿವೆ. ಆದರೆ ನೀರಿನ ಸಂಗ್ರಹಕ್ಕೆ ಸರಿಯಾದ ಪರ್ಯಾಯ ವ್ಯವಸ್ಥೆಗಳಿಲ್ಲ. ಲೋಹದ ಬಾಟಲ್‍ಗಳು ಸಂಚಾರ ವೇಳೆ ತೆಗೆದುಕೊಂಡು ಹೋಗಲು ಸೂಕ್ತವಾಗಿಲ್ಲ. ಹೀಗಾಗಿ ರೈಲ್ವೆ ಇಲಾಖೆಯಲ್ಲಿ ಈ ಆದೇಶ ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ ಎಂಬುದು ಜನಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆ.

ಕೇಂದ್ರ ರೈಲ್ವೆ ರಾಜ್ಯ ಸಚಿವ ಪ್ರಲ್ಹಾದ್ ಜೋಷಿ ತಮ್ಮ ಟ್ವಿಟರ್‍ನಲ್ಲಿ ಏಕಬಳಕೆ ಪ್ಲಾಸ್ಟಿಕ್ ಅನ್ನು ನಿಷೇಧಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು, ಸ್ವಾತಂತ್ರ ದಿನಾಚರಣೆ ವೇಳೆ ಪ್ಲಾಸ್ಟಿಕ್ ಮುಕ್ತ ಭಾರತದ ಬಗ್ಗೆ ಮಾತನಾಡಿದ್ದರು. ಉತ್ತರಾಖಂಡ್ ಸರ್ಕಾರ ಇತ್ತೀಚಿಗೆ ತಮ್ಮ ಇಲಾಖೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದು, ಇದನ್ನು ಸಂಪೂರ್ಣವಾಗಿ ಜಾರಿಗೆ ತರುವ ಪ್ರಯತ್ನ ಮಾಡುತ್ತಿದೆ. ಈಗ ರೈಲ್ವೆ ಇಲಾಖೆ ಅದೇ ರೀತಿ ಹೆಜ್ಜೆಯನ್ನು ಮುಂದಿಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ