ಬೆಂಗಳೂರು,ಆ.21-ಯಾವುದೇ ಕಾರಣಕ್ಕೂ ನಿಮ್ಮನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಸುಪ್ರೀಂಕೋರ್ಟ್ ನಿಮ್ಮ ಪರವಾಗಿ ತೀರ್ಪು ನೀಡಿದ ಹತ್ತು ದಿನದೊಳಗೆ ಸಂಪುಟಕ್ಕೆ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನರ್ಹ ಶಾಸಕರಿಗೆ ಅಭಯ ನೀಡಿದ್ದಾರೆ.
ಕಳೆದ ತಡರಾತ್ರಿ ಅನರ್ಹ ಶಾಸಕರಾದ ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಪ್ರತಾಪ್ಗೌಡ ಪಾಟೀಲ್, ಮುನಿರತ್ನ, ಎಸ್.ಟಿ.ಸೋಮಶೇಖರ್ ಸೇರಿದಂತೆ ಮತ್ತಿತರರು ಡಾಲರ್ಸ್ ಕಾಲೋನಿಯ ದವಳಗಿರಿಯ ಸಿಎಂ ನಿವಾಸದಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದರು.
ನೀವು ಬೇರೊಬ್ಬರ ಮಾತು ಕೇಳಿ ಆತಂಕಕ್ಕೆ ಒಳಗಾಗುವುದು ಬೇಡ. ಕೆಲವರು ನಿಮ್ಮನ್ನು ಪ್ರಚೋದಿಸುವ ಕಾರಣಕ್ಕಾಗಿಯೇ ಆಗಾಗ್ಗೆ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಾರೆ. ಅದರ ಬಗ್ಗೆ ಸಾಸಿವೆ ಕಾಳಿನಷ್ಟು ಅಪನಂಬಿಕೆ ಇಟ್ಟುಕೊಳ್ಳಬೇಡಿ. ಎಂತಹ ಸಂದರ್ಭದಲ್ಲೂ ನೀವು ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ಅನರ್ಹರಿಗೆ ಅಭಯ ನೀಡಿದ್ದಾರೆ.
ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಅತಿವೃಷ್ಟಿ ಇರುವುದರಿಂದ ನಾನು ದೆಹಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಮುಂದಿನ ವಾರ ನಾನೇ ದೆಹಲಿಗೆ ಬಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ, ಕಾರ್ಯಾಧ್ಯಕ್ಷ ಜಗನ್ನಾಥ್ ನಡ್ಡಾ ಅವರನ್ನು ಭೇಟಿ ಮಾಡಿಸುತ್ತೇನೆ.
ಸುಪ್ರೀಂಕೋರ್ಟ್ನಲ್ಲಿ ನಿಮ್ಮ ಅನರ್ಹತೆ ಕುರಿತಂತೆ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ. ನಮ್ಮ ಪಕ್ಷವು ನಿಮಗೆ ಎಲ್ಲಾ ರೀತಿಯ ಕಾನೂನು ನೆರವನ್ನು ನೀಡುತ್ತದೆ. ನಮ್ಮನ್ನು ನಂಬಿದವರಿಗೆ ಮೋಸ ಮಾಡುವುದು ನನ್ನ ಕನಸು-ಮನಸ್ಸಿನಲ್ಲೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿಮ್ಮ ನಿಮ್ಮ ಕ್ಷೇತ್ರಗಳಿಗೆ ಯಾವ್ಯಾವ ಕೆಲಸ ಕಾರ್ಯಗಳು ನಡೆಯಬೇಕೆಂದು ಪಟ್ಟಿ ಸಿದ್ಧಪಡಿಸಿ ವರದಿ ರೂಪದಲ್ಲಿ ನೀಡಿ. ತಕ್ಷಣವೇ ನಾನು ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತೇನೆ. ಶಾಸಕ ಸ್ಥಾನ ಇಲ್ಲದಿದ್ದರೂ ನೀವೇ ಮುತುವರ್ಜಿ ವಹಿಸಿ ಕೆಲಸ ಮಾಡಿಸಿ ಎಂದು ಸೂಚಿಸಿದ್ದಾರೆ.
ಅನರ್ಹ ಶಾಸಕರು ಎಂಬ ಕಾರಣಕ್ಕೆ ಅಧಿಕಾರಿಗಳು ಉದಾಸೀನ ತೋರದಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಜಿಲ್ಲಾಧಿಕಾರಿಗಳು, ಸಿಇಒಗಳು, ತಹಶೀಲ್ದಾರ್ ಸೇರಿದಂತೆ ಎಲ್ಲರಿಗೂ ಸೂಚನೆ ನೀಡುತ್ತೇನೆ. ನೀವು ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.
ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಾಲಯ ಇನ್ನೂ ಕೈಗೆತ್ತಿಕೊಂಡಿಲ್ಲ. ಒಂದು ವೇಳೆ ನಿಮ್ಮ ಪರವಾಗಿ ನ್ಯಾಯಾಲಯ ತೀರ್ಪು ನೀಡಿದರೆ 10 ದಿನದಲ್ಲಿ ಸಂಪುಟಕ್ಕೆ ತೆಗೆದುಕೊಳ್ಳುವ ಭರವಸೆ ಕೊಟ್ಟಿದ್ದಾರೆ. ಒಂದು ಹಂತದಲ್ಲಿ ಅನರ್ಹಗೊಂಡ ಶಾಸಕರು ಆತಂಕಕ್ಕೆ ಒಳಗಾಗಿದ್ದರು.
ಹೀಗಾಗಿಯೇ ಬಿಎಸ್ವೈ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.