ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ನಯಾ ಪೈಸೆಕೊಟ್ಟಿಲ್ಲ-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು,ಆ.21-ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ನಯಾ ಪೈಸೆಕೊಟ್ಟಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜೆ.ಪಿ.ಭವನದಲ್ಲಿಂದು ನಡೆದ ಚಾಮರಾಜನಗರ ಜಿಲ್ಲಾಮಟ್ಟದ ಪದಾಧಿಕಾರಿಗಳು, ಮುಖಂಡರ ಸಭೆಗೂ ಮುನ್ನ ಅವರು ಮಾತನಾಡಿದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ 100 ತಾಲೂಕುಗಳಲ್ಲಿ ಬರಪರಿಸ್ಥಿತಿ ಉಂಟಾಗಿತ್ತು. ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು. ಬರ ಪರಿಹಾರಕ್ಕಾಗಿ 3 ಸಾವಿರ ಕೋಟಿಗೆ ಒತ್ತಾಯಿಸಿ ಮನವಿ ಸಲ್ಲಿಸಿತ್ತು. ಲೋಕಸಭೆ ಚುನಾವಣೆಗೆ ಮುನ್ನ ಮೈತ್ರಿ ಸರ್ಕಾರ ಹಿಂಗಾರು ಹಂಗಾಮಿನ ಬರಪೀಡಿತ ಪ್ರದೇಶಗಳ ನೆರವಿಗೆ 1029ಕೋಟಿ ರೂ.ನೀಡಿದೆ. ಆದರೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ನೆರೆ ಹಾವಳಿ ಹಾಗೂ ಅತಿವೃಷ್ಟಿಗೆ ಕೇಂದ್ರ ಸರ್ಕಾರ ಏನೇನೂ ಕೊಟ್ಟಿಲ್ಲ. ಇದುವರೆಗೂ ಬಿಡುಗಡೆಯಾಗಿರುವ ಕೇಂದ್ರದ ಅನುದಾನ ಬರಪೀಡಿತ ಪ್ರದೇಶಗಳಿಗೆ ಸಂಬಂಧಿಸಿದ್ದಾಗಿದೆ ಎಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 1700 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಕೊಡಬೇಕಾಗಿದ್ದರೂ ಅದನ್ನು ಬಿಡುಗಡೆ ಮಾಡಿಲ್ಲ. ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಕೂಲಿ ಕಾರ್ಮಿಕರಿಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ರಾಜ್ಯದಿಂದಲೇ ಹಣ ನೀಡಿದ್ದರು ಎಂದು ಹೇಳಿದರು.

ರಾಜ್ಯದಿಂದ 25ಬಿಜೆಪಿ ಸಂಸದರಿದ್ದಾರೆ. ಅವರು ಏನು ಮಾಡುತ್ತಿದ್ದಾರೆ. ಈಗ ಮಾತನಾಡುವುದಿಲ್ಲ. ನಾವು ಕಾಯುತ್ತೇವೆ. ಹಾಲು ಕಾಯಿಸಿದಷ್ಟು ರುಚಿಯಾಗುತ್ತದೆ. ದೇವೇಗೌಡರು ಸುಮ್ಮನೆ ಕೂರುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ 2500 ಮಂದಿ ರೈತರನ್ನು ದೆಹಲಿಗೆ ಕರೆದೊಯ್ದಿದ್ದೆ. ನಮಗೆ ಹೋರಾಟ ಮಾಡುವುದು ಚೆನ್ನಾಗಿ ಗೊತ್ತಿದೆ.

ಯಾರಿಗೂ ಹೆದರುವ ಮತ್ತು ಭಯಪಡುವ ಅಗತ್ಯವಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವುದನ್ನು ಕೆಲವರಿಗೆ ನೋಡಲು ಆಗಲಿಲ್ಲ.

ಕಾಂಗ್ರೆಸ್‍ನ ಕೆಲವು ಮಿತ್ರರು ಸಮ್ಮಿಶ್ರಸರ್ಕಾರ ತೆಗೆಯಬೇಕೆಂದು ಭಾವಿಸಿದ್ದರು ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ