ನವದೆಹಲಿ: ಐಎನ್ಎಕ್ಸ್. ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಂದ ಬಂಧನದ ಭೀತಿ ಎದುರಿಸುತ್ತಿರುವ ಮಾಜೀ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಮಂಗಳವಾರ ರಾತ್ರಿಯಿಂದಲೇ ನಾಪತ್ತೆಯಾಗಿದ್ದಾರೆ.
ಚಿದಂಬರಂ ಅವರು ಸಲ್ಲಿಸಿದ್ದ ನಿರಿಕ್ಷಣಾ ಜಾಮೀನು ಅರ್ಜಿಯನ್ನು ಮಂಗಳವಾರದಂದು ದೆಹಲಿ ಉಚ್ಛನ್ಯಾಯಾಲಯವು ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಸಿಬಿಐ ಮತ್ತು ಇಡಿ ಅಧಿಕಾರಿಗಳ ಎರಡು ತಂಡ ನವದೆಹಲಿಯ ಜೋರ್ ಭಾಗ್ ನಲ್ಲಿರುವ ಅವರ ನಿವಾಸಕ್ಕೆ ಚಿದಂಬರಂ ಅವರನ್ನು ವಶಕ್ಕೆ ಪಡೆಯಲೆಂದು ತೆರಳಿತ್ತು.
ಆದರೆ ಮಾಜೀ ಕೇಂದ್ರ ಸಚಿವರು ಮನೆಯಲ್ಲಿ ಇಲ್ಲದ ಕಾರಣದಿಂದ ಈ ಎರಡೂ ತಂಡಗಳು ಬರಿಗೈಯಲ್ಲೇ ವಾಪಸಾಗಬೇಕಾಯಿತು. ಮತ್ತು ಚಿದಂಬರಂ ಅವರ ಮನೆ ಮುಂದೆ ಸೂಚನಾ ಪತ್ರವೊಂದನ್ನು ಅಂಟಿಸಿ ಬಂದಿದೆ ಮತ್ತು ಅದರಲ್ಲಿ ಮುಂದಿನ ಎರಡು ಗಂಟೆಗಳೊಳಗಾಗಿ ತಮ್ಮ ಮುಂದೆ ವಿಚಾರಣೆಗೆ ಹಾಜರಾಗುವಂತೆ ನಮೂದಿಸಲಾಗಿದೆ.
ಸಿಬಿಐ ತಂಡ ಇಂದು ಬೆಳಿಗ್ಗೆ ಮತ್ತೆ ಚಿದಂಬರಂ ಅವರ ಮನೆಗೆ ಭೇಟಿ ನೀಡಿ ವಾಪಸಾಗಿದೆ. ಕಳೆದ ರಾತ್ರಿಯಿಂದ ವಿಚಾರಣಾಧಿಕಾರಿಗಳ ತಂಡ ಚಿದಂಬರಂ ಅವರ ಮನೆಗೆ ನೀಡುತ್ತಿರುವ ಮೂರನೇ ಭೇಟಿ ಇದಾಗಿದೆ.
ಚಿದಂಬರಂ ಅವರ ನಿರೀಕ್ಷಣಾ ಜಾಮೀನು ತಡೆ ಮೇಲ್ಮನವಿ ಅರ್ಜಿ ಇಂದು ಬೆಳಿಗ್ಗೆ 10.30ಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ಸಾಂವಿಧಾನಿಕ ಪೀಠದಲ್ಲಿ ಅಯೋಧ್ಯೆ ಪ್ರಕರಣದ ನಿತ್ಯ ವಿಚಾರಣೆ ನಡೆಯುತ್ತಿರುವುದರಿಂದ ಚಿದಂಬರಂ ಅವರ ಅರ್ಜಿ ಹಿರಿಯ ನ್ಯಾಯಮೂರ್ತಿಗಳ ಪೀಠವು ವಿಚಾರಣೆ ನಡೆಸಲಿದೆ ಎಂದು ಚಿದಂಬರಂ ಅವರ ಪ್ರಮುಖ ವಕೀಲರಲ್ಲಿ ಒಬ್ಬರಾಗಿರುವ ಕಪಿಲ್ ಸಿಬಲ್ ಅವರು ತಿಳಿಸಿದ್ದಾರೆ.
ಚಿದಂಬರಂ ಅವರು ಕೇಂದ್ರ ಹಣಕಾಸು ಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯು ನಿಯಮ ಬಾಹಿರವಾಗಿ ಐಎನ್ ಎಕ್ಸ್ ಮಾಧ್ಯಮ ಸಂಸ್ಥೆಗೆ 305 ಕೋಟಿ ರೂಪಾಯಿಗಳ ವಿದೇಶಿ ಬಂಡವಾಳ ಹೂಡಿಕೆಗೆ ಹಸಿರು ನಿಶಾನೆ ತೋರಿಸಿತ್ತು ಎಂದು ಆರೋಪಿಸಿ ಸಿಬಿಐ 2017ರ ಮೇ 15ರಂದು ಎಫ್.ಐ.ಆರ್. ಒಂದನ್ನು ದಾಖಲಿಸಿಕೊಂಡಿತ್ತು. ಬಳಿಕ ಜಾರಿ ನಿರ್ದೇಶನಾಲಯವು 2018ರಲ್ಲಿ ಹಣ ಚೆಲುವೆ (ಮನಿ ಲಾಂಡ್ರಿಂಗ್) ಪ್ರಕರಣವನ್ನು ಚಿದಂಬರಂ ಅವರ ಮೇಲೆ ದಾಖಲಿಸಿಕೊಂಡಿತ್ತು.
ಚಿದಂಬರಂ ಅವರ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆಗೆ ಸ್ವೀಕರಿಸಿದ್ದರೂ ಅವರ ವಿರುದ್ಧ ವಿಚಾರಣೆಗೆ ಸಿಬಿಐ ಮತ್ತು ಇಡಿ ಇಷ್ಟು ಆತುರ ತೋರಿಸುತ್ತಿರುವುದು ಯಾಕೆ ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.