ಐಎನ್ಎಕ್ಸ್ ಪ್ರಕರಣ: ಪಿ.ಚಿದಂಬರಂ ವಿರುದ್ಧ ಲುಕ್​ಔಟ್​ ನೊಟೀಸ್

ನವದೆಹಲಿ; ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪಿ. ಚಿದಂಬರಂ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ರದ್ದು ಮಾಡಿ ಬೆನ್ನಿಗೆ ಮಾಜಿ ಹಣಕಾಸು ಸಚಿವ ಸುಪ್ರೀಂ ಮೆಟ್ಟಿಲೇರಿದ್ದರು. ಆದರೆ, ಕುರಿತು ಸಿಐಜೆ ರಂಜನ್ ಗೊಗೋಯ್ ಅವರಿಗೆ ಮನವಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯ ಇದು ಹಣಕಾಸು ದುರ್ಬಳಕೆ ಪ್ರಕರಣವಾಗಿದ್ದು ಜಾಮೀನು ನೀಡದಂತೆ ತಾಕೀತು ಮಾಡಿದೆ. ಅಲ್ಲದೆ, ಮಾಜಿ ಕೇಂದ್ರ ಹಣಕಾಸು ಸಚಿವರ ವಿರುದ್ಧಲುಕ್ಔಟ್ನೊಟೀಸ್ ಜಾರಿ ಮಾಡುವ ಮೂಲಕ ಮತ್ತೊಂದು ಆಘಾತ ನೀಡಿದೆ.

ಐಎನ್ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಪಿ. ಚಿದಂಬರಂ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಜಾರಿ ನಿರ್ದೇಶನಾಲಯ ಈ ಹಿಂದೆ ಎರಡು ಬಾರಿ ನೊಟೀಸ್ ಜಾರಿ ಮಾಡಿತ್ತು. ಆದರೆ, ಪಿ. ಚಿದಂಬರಂ ವಿಚಾರಣೆಗೆ ಹಾಜರಾಗಿರಲಿಲ್ಲ. ಅಲ್ಲದೆ ಈ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನಿನ್ನೆ ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು.

ಇದರ ಬೆನ್ನಿಗೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳು ನಿನ್ನೆ ಚಿದಂಬರಂ ಅವರನ್ನು ಬಂಧಿಸಲು ಅವರ ಮನೆಗೆ ತೆರಳಿದ್ದರು. ಆದರೆ, ಚಿದಂಬರಂ ಮನೆಯಲ್ಲಿ ಇಲ್ಲದ ಕಾರಣ ಅಧಿಕಾರಿಗಳು ಬರಿಗೈಲಿ ವಾಪಾಸಾಗಿದ್ದರು. ಈ ನಡುವೆ ಮನೆಯ ಗೋಡೆಗೆ ನೊಟೀಸ್ ಒಂದನ್ನು ಅಂಟಿಸಿದ್ದ ಸಿಬಿಐ ಅಧಿಕಾರಗಳು ಈ ನೊಟೀಸ್ ಅಂಟಿಸಿ ಎರಡು ಗಂಟೆಯಲ್ಲಿ ಚಿದಂಬರಂ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಹೀಗಾಗಿ ಬಂಧನದಿಂದಪ್ಪಿಸಿಕೊಳ್ಳಲು ಚಿದಂಬರಂ ತಮ್ಮ ವಕೀಲರ ಮೂಲಕ ಸುಪ್ರೀಂ ಕೋರ್ಟ್​ಗೆ ಇಂದು ಮನವಿ ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಸಹ ಇದೀಗ ಈ ಮನವಿಯ ಅರ್ಜಿ ವಿಚಾರಣೆಯನ್ನು ಮುಂದೂಡಿದ್ದು ಇದೀಗ ಚಿದಂಬರಂ ಬಂಧನ ಬಹುತೇಕ ಖಚಿತವಾಗಿದೆ. ಅಲ್ಲದೆ, ಬಂಧನದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿರುವ ಅವರ ವಿರುದ್ಧ ಇಡಿ ಅಧಿಕಾರಿಗಳು ಇದೀಗ ‘ಲುಕ್ಔಟ್’ ನೊಟೀಸ್ ಜಾರಿ ಮಾಡಿದ್ದು ಮತ್ತಷ್ಟು ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ.

ಏನಿದು ಲುಕ್ಔಟ್ನೊಟೀಸ್?​ : 

ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಯಾವುದೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ವಿಚಾರಣೆಗೆ ಮುಂದಾಗಿ, ಅಕಸ್ಮಾತ್ ನೊಟೀಸ್ ನೀಡಿಯೂ ಆತ ವಿಚಾರಣೆಗೆ ಹಾಜರಾಗದಿದ್ದಲ್ಲಿ ಆತ ದೇಶದಿಂದ ತಪ್ಪಿಸಿಕೊಳ್ಳದಂತೆ ತಡೆಹಿಡಿಯಲು ಆರೋಪಿಯ ವಿರುದ್ಧ ಅಧಿಕಾರಿಗಳು ಈ ಲುಕ್​ಔಟ್​ ನೊಟೀಸ್ ಅಸ್ತ್ರವನ್ನು ಪ್ರಯೋಗಿಸುತ್ತಾರೆ.

ಲುಕ್​ನೊಟೀಸ್​ಗೆ ಒಳಗಾದ ಯಾವುದೇ ವ್ಯಕ್ತಿಯ ಪೋಟೋವನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಬಸ್​ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುತ್ತಾರೆ. ಅಲ್ಲದೆ, ಈ ಪೋಟೋದಲ್ಲಿರುವವರ ಕುರಿತು ಮಾಹಿತಿ ನೀಡಿ ಎಂದು ಸಾರ್ವಜನಿಕರ ಬಳಿ ಮನವಿ ಮಾಡಲಾಗುತ್ತದೆ.

ಸಾಮಾನ್ಯವಾಗಿ ಇಂತಹ ನೊಟೀಸ್​ಗಳನ್ನು ಕ್ರಿಮಿನಲ್ ಅಥವಾ ಆರ್ಥಿಕ ಅಪರಾಧಿಗಳ ವಿರುದ್ಧ ಹೊರಡಿಸಲಾಗುತ್ತದೆ. ಆದರೆ, ಮಾಜಿ ಕೇಂದ್ರ ಹಣಕಾಸು ಸಚಿವರ ವಿರುದ್ಧ ಇಂತಹ ನೊಟೀಸ್ ಒಂದನ್ನು ಜಾರಿ ಮಾಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಹೀಗಾಗಿ ಪಿ. ಚಿದಂಬರಂ ಇಂದು ಬಂಧನಕ್ಕೆ ಒಳಗಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ