ರಾಜಾಜಿನಗರದಿಂದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವೇಳೆ ಎಲ್ಲಾ ಮಾನದಂಡ ಹಾಗೂ ಪಕ್ಷದ ಸೇವೆ ಗಮನಿಸುವಂತೆ ತಿರುನಾವುಕರಸು ಮನವಿ

ಬೆಂಗಳೂರು, ಮಾ.31- ರಾಜಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಎಲ್ಲಾ ಮಾನದಂಡ ಹಾಗೂ ಪಕ್ಷದ ಸೇವೆಯ ಬಗ್ಗೆ ಗಮನ ಹರಿಸಬೇಕು ಎಂದು ಬೆಂಗಳೂರು ಕೇಂದ್ರದಿಂದ ಕಾಂಗ್ರೆಸ್ ಸಮಿತಿ ಸದಸ್ಯ ತಿರುನಾವುಕರಸು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈಗಾಗಲೇ ಮಾಜಿ ಮೇಯರ್ ಜಿ.ಪದ್ಮಾವತಿ ಅವರು ತಮಗೆ ಟಿಕೆಟ್ ಸಿಗುತ್ತದೆ ಎಂದು ಪ್ರಚಾರ ನಡೆಸುತ್ತಿದ್ದಾರೆ ಮತ್ತು ಇದರಿಂದ ಸ್ಥಳೀಯ ಕಾಂಗ್ರೆಸಿಗರಲ್ಲಿ ಗೊಂದಲ ಮೂಡಿದೆ ಎಂದು ಅವರು ತಿಳಿಸಿದ್ದಾರೆ.

ಈ ಕ್ಷೇತ ವ್ಯಾಪ್ತಿಯ ಪಾಲಿಕೆ ಚುನಾವಣೆಗಳಲ್ಲಿ ಏಳು ಬೀಳುಗಳನ್ನು ಕಂಡಿರುವ ಪದ್ಮಾವತಿ ಅವರನ್ನು ಕಳೆದ ಬಾರಿ ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿ ಪಕ್ಷದ ವರಿಷ್ಠರು ಮನ್ನಣೆ ನೀಡಿದರು. ಆದರೆ ಅವರು ಪಕ್ಷ ಸಂಘಟನೆಯಲ್ಲಿ ತೊಡಗಲಿಲ್ಲ. ಮತ್ತು ಸಭೆ ಸಮಾರಂಭಗಳಲ್ಲೂ ಪಾಲ್ಗೊಳ್ಳದೆ ಅಪಮಾನ ಮಾಡಿದ್ದಾರೆ. ಅನ್ಯ ಪಕ್ಷದವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಇದು ಕಾಂಗ್ರೆಸ್‍ಗೆ ಮುಂದಿನ ದಿನಗಳಲ್ಲಿ ಮುಳುವಾಗಲಿದೆ ಎಂದು ಆರೋಪಿಸಿದ್ದಾರೆ.
ಕೂಡಲೇ ಗಮನ ಹರಿಸಿ ನಿಷ್ಠಾವಂತರಾಗಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಇಲ್ಲವಾದರೆ ಮತ್ತೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಹೇಳಿದ್ದಾರೆ.
ಪದ್ಮಾವತಿ ಅವರ ನಡೆ ಇನ್ನೂ ನಿಗೂಢವಾಗಿದ್ದು , ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಅಥವಾ ಬೇರೆ ಪಕ್ಷದಿಂದ ಸ್ಪರ್ಧಿಸಬಹುದು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ