ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು-ಮಾಜಿ ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು,ಆ.17- ಪ್ರವಾಹ ಪೀಡಿತ ಪ್ರದೇಶಗಳ ಎಲ್ಲಾ ಗ್ರಾಮಗಳಲ್ಲೂ ಮುಂದಿನ ಒಂದು ವರ್ಷದ ವರೆಗೆ ಇಂದಿರಾಕ್ಯಾಂಟಿನ್ ಮಾದರಿಯಲ್ಲಿ ರಿಯಾಯ್ತಿ ದರದ ಆಹಾರ ಪೂರೈಕೆಗೆ ತಕ್ಷಣವೇ ಕ್ಯಾಂಟಿನ್ ಪ್ರಾರಂಭಿಸಲು ಕಾಂಗ್ರೆಸ್‍ನ ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನ ಸಮಿತಿ ಶಿಫಾರಸು ಮಾಡಿದೆ.
ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಸಾಕ್ಷಾತ್ ಸಮೀಕ್ಷೆ ವಸ್ತುಸ್ಥಿತಿಯ ವರದಿ ಪ್ರಸ್ತಾಪಿಸಿ, ಪ್ರವಾಹಕ್ಕೀಡಾಗಿರುವ ಗ್ರಾಮಗಳ ಜನರ ಅನುಕೂಲಕ್ಕಾಗಿ ರಿಯಾಯ್ತಿ ದರದ ಇಂದಿರಾಕ್ಯಾಂಟಿನ್ ಮಾದರಿಯ ಕ್ಯಾಂಟಿನ್‍ಗಳನ್ನು ಆರಂಭಿಸುವಂತೆ ಸಲಹೆ ನೀಡಿದರು.

ಅತಿವೃಷ್ಟಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಅನುದಾನ , ಸಹಾಯ, ಸೌಲಭ್ಯ ಒದಗಿಸಲು ಕೇಂದ್ರವನ್ನು ಆಗ್ರಹಿಸಬೇಕು ಎಂದು ಅವರು, ಬೆಳಗಾವಿ ಜಿಲ್ಲೆಯ ಸಾವಿರಾರು ಗ್ರಾಮಗಳು ನೆರೆ ಹಾವಳಿಗೆ ತುತ್ತಾಗಿವೆ. ಹಲವು ಗ್ರಾಮಗಳ ಪುನರ್ ನಿರ್ಮಾಣವಾಗಬೇಕಿದೆ. ಪುನರ್ವಸತಿ ಹಾಗೂ ಪುನರ್ ನಿರ್ಮಾಣಕ್ಕಾಗಿ ಉನ್ನತ ಮಟ್ಟದ ಪ್ರಾಧಿಕಾರ ರಚನೆಯಾಗಬೇಕು ಎಂದು ಹೇಳಿದರು.

ಪ್ರವಾಹ ಬಾಧಿತ ಜಿಲ್ಲೆಗಳಲ್ಲಿ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ಉಸ್ತುವಾರಿಗೆ ನೇಮಿಸಬೇಕು. ಕಾಲಮಿತಿಗೆ ಒಳಪಟ್ಟು ಅವರು ಕೆಲಸ ರ್ನಿಹಿಸಬೇಕು.ಪ್ರವಾಹ ಪೀಡಿತ ಪ್ರದೇಶಗಳಿಗೆ ಇದುವರೆಗೂ ಪ್ರಧಾನಿ ಮೋದಿ ಭೇಟಿ ನೀಡಿಲ್ಲ. 2009ರಲ್ಲಿ ಪ್ರವಾಹ ಎದುರಾದಾಗ ಅಂದಿನ ಪ್ರಧಾನಿ ಮನಮೋಹನ್‍ಸಿಂಗ್ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಎರಡು ಸಾವಿರ ಕೋಟಿ ಬಿಡುಗಡೆ ಮಾಡಿದ್ದರು.ಇಬ್ಬರು ಕೇಂದ್ರ ಸಚಿವರು ಬಂದು ಹೋದರೂ ಪರಿಹಾರ ಮತ್ರ ಬಂದಿಲ್ಲ. ಕೂಡಲೇ ಕೇಂದ್ರ ಸರ್ಕಾರ ಐದು ಸಾವಿರ ಕೋಟಿ ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕಿದೆ ಎಂದರು.

20 ಲಕ್ಷ ಬೆಳೆ ಹಾನಿ, ಭಾರೀ ಪ್ರಮಾಣದ ಕಬ್ಬಿನ ಬೆಳೆ ಹಾನಿ, ಒಂದು ಲಕ್ಷ ಎಕರೆ ಭೂ ಕೊರತೆ ಮೂರು ಸಾವಿರ ಗ್ರಾಮಗಳ ಮುಳುಗಡೆ, ಒಂದು ಸಾವಿರ ಗ್ರಾಮಗಳ ಪುನರ್ ನಿರ್ಮಾಣ ಸವಾಲು, ಜಾನುವಾರುಗಳಿಗೆ ಹಾನಿ, ಕೃಷಿ, ಗೃಹೋಪಯೋಗಿ, ಶಾಲಾ ಮಕ್ಕಳ ಪುಸ್ತಕಗಳಿಗೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯುಂಟಾಗಿದೆ ಎಂದು ಮಧ್ಯಂತರ ವರದಿಯಲ್ಲಿ ವಿವರಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ