ಬೆಂಗಳೂರು- ಜೆಡಿಎಸ್ ಶಾಸಕ, ಮಾಜಿ ಸಚಿವ ಜಿಟಿ.ದೇವೇಗೌಡ ಅವರು ಇತ್ತೀಚೆಗೆ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಪಕ್ಷ ಬದಲಿಸುವ ಉದ್ದೇಶ ಈ ಭೇಟಿಯ ಹಿಂದೆ ಇದೆ ಎಂಬ ಅನುಮಾನ ಮೂಡಿಸಿದೆ.
ಎಚ್.ವಿಶ್ವನಾಥ್ ಅವರ ರಾಜೀನಾಮೆಯಿಂದ ತೆರವಾಗಿರುವ ಹುಣಸೂರು ಕ್ಷೇತ್ರಕ್ಕೆ ಮುಂದಿನ ಉಪಚುನಾವಣೆಗೆ ಬಿಜೆಪಿಯಿಂದ ತಮ್ಮ ಪುತ್ರ ಹರೀಶ್ ಗೌಡ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಲು ಜಿ.ಟಿ.ದೇವೇಗೌಡ ಅವರು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಜಿ.ಟಿ.ದೇವೇಗೌಡ ಅವರುಸಚಿವರಾಗಿದ್ದಾಗಿನಿಂದಲೂ ಬಿಜೆಪಿ ಪರ ಮೃದು ಧೋರಣೆ ವ್ಯಕ್ತಪಡಿಸುತ್ತಲೇ ಬಂದಿದ್ದರು.ಮೋದಿ ಅವರನ್ನು ಹೊಗಳುತ್ತಾ.ಸ್ವ-ಪಕ್ಷದವರ ಮೇಲೆ ಮುನಿಸು ತೋರಿಸಿ ಸರ್ಕಾರದ ಭಾಗವಾಗಿದ್ದರೂ ಪಕ್ಷದಿಂದ ಅಲ್ಪ ಅಂತರ ಕಾಯ್ದುಕೊಂಡಿದ್ದರು.
ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಬಗ್ಗೆಯೂ ಹೇಳಿದ್ದ ಜಿ.ಟಿ.ದೇವೇಗೌಡ ಅವರು ಮಗನಿಗೆ ರಾಜಕೀಯದಲ್ಲಿ ಭವಿಷ್ಯ ರೂಪಿಸುವ ಯತ್ನ ನಡೆಸಿದ್ದಾರೆ.
ಮತ್ತೊಂದೆಡೆ ಎಚ್.ವಿಶ್ವನಾಥ್ ಅವರೂ ಸಹ ತಮ್ಮ ಮಗನಿಗೂ ರಾಜಕೀಯದಲ್ಲಿ ನೆಲೆ ಕಲ್ಪಿಸಿಕೊಡಲು ಯತ್ನಿಸುತ್ತಿದ್ದು, ಹುಣಸೂರು ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಮಗ ಅಮಿತ್ ದೇವರಟ್ಟಿಗೆ ಕೊಡಿಸುವ ಯತ್ನ ನಡೆಸಿದ್ದಾರೆ.ಈ ಮಧ್ಯೆ ಜಿ.ಟಿ.ದೇವೇಗೌಡ ರಂಗಪ್ರವೇಶ ಮಾಡಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಜಿ.ಟಿ.ದೇವೇಗೌಡ ಅವರು ಜೆಡಿಎಸ್ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು.ಕೆಲವು ಕಡೆ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.ಜಿ.ಟಿ.ಡಿ ಅವರಿಗೆ ಉನ್ನತ ಶಿಕ್ಷಣ ಸಚಿವ ಖಾತೆ ನೀಡಿದಾಗಲೇ ಅವರು ಪ್ರತಿಭಟಿಸಿದ್ದರು. ಆದರೆ ನಂತರ ಅಸಮಾಧಾನವನ್ನು ಹೊತ್ತುಕೊಂಡೇ ಖಾತೆ ನಿರ್ವಹಿಸಿದ್ದರು.
ಮೈಸೂರು ಕ್ಷೇತ್ರದಲ್ಲಿ ಸಹ ತಮ್ಮ ಸಹವರ್ತಿ ಸಾ.ರಾ.ಮಹೇಶ್ ಅವರೊಂದಿಗೆ ಭಿನ್ನಾಭಿಪ್ರಾಯವನ್ನು ಜಿ.ಟಿ.ದೇವೇಗೌಡ ಹೊಂದಿದ್ದರು ಎನ್ನಲಾಗಿದೆ.
ಮೈಸೂರಿನಲ್ಲಿ ಪಕ್ಷವು ಪೂರ್ಣ ಸಾ.ರಾ.ಮಹೇಶ್ ಅವರ ಹಿಡಿತದಲ್ಲಿದೆ, ತಮ್ಮ ಮಾತು ನಡೆಯುತ್ತಿಲ್ಲವೆಂದು.ಸಾ.ರಾ.ಮಹೇಶ್ ಅವರು ಮೈಸೂರಿನ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಜಿ.ಟಿ.ದೇವೇಗೌಡ ಅವರು ಕುಮಾರಸ್ವಾಮಿ ಬಳಿ ದೂರು ನೀಡಿದ್ದರು.ಆದರೆ ಕುಮಾರಸ್ವಾಮಿ ಅವರು ಇದಕ್ಕೆ ಮೌಲ್ಯ ನೀಡಲಿಲ್ಲ. ಹಾಗಾಗಿ ಮುನಿಸು ಇನ್ನಷ್ಟು ಹೆಚ್ಚಾಯಿತು.
ಭಿನ್ನಮತೀಯ ಶಾಸಕರು ರಾಜೀನಾಮೆ ನೀಡಿದಾಗ ಆ ಪಟ್ಟಿಯಲ್ಲಿ ಜಿ.ಟಿ.ದೇವೇಗೌಡ ಅವರ ಹೆಸರೂ ಇತ್ತು, ಮಾಧ್ಯಮಗಳಲ್ಲಿ ಜಿ.ಟಿ.ದೇವೇಗೌಡ ಅವರು ರಾಜೀನಾಮೆ ನೀಡುವ ಬಗ್ಗೆ ಸುದ್ದಿಗಳು ಹರಿದಾಡಿದವು ಆದರೆ ಜಿ.ಟಿ.ದೇವೇಗೌಡ ಅವರು ರಾಜೀನಾಮೆ ನೀಡಲಿಲ್ಲ. ಆದರೆ ಮೈತ್ರಿಯ ಬಗ್ಗೆ ಅಸಮಾಧಾನದ ಮಾತುಗಳನ್ನು ಆಡಿದ್ದು ಸ್ಪಷ್ಟವಾಗಿತ್ತು.
ಹರಿಯುವ ನದಿಯೊಂದಿಗೆ ಬೆರೆಯುವ ಹುನ್ನಾರದೊಂದಿಗೆ ಜಿಟಿ.ದೇವೇಗೌಡ ಅವರು ಜೆಡಿಎಸ್ ಪಕ್ಷದಲ್ಲಿದ್ದರೂ ಮಗನಿಗೆ ಬಿಜೆಪಿ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ವಿಶ್ವನಾಥ್ ಪುತ್ರ ಅಮಿತ್ ಅವರಿಗೆ ಹೋಲಿಸಿದರೆ ಹರೀಶ್ ಗೌಡ ಪ್ರಬಲ ಅಭ್ಯರ್ಥಿ ಆಗಿದ್ದು, ಈ ಬಗ್ಗೆ ಬಿಜೆಪಿಯು ನಿರ್ಣಯ ತೆಗೆದುಕೊಳ್ಳಲಿದೆ.