ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯಾದ ಅತಿವೃಷ್ಠಿಗೆ ಜನರು ನಲುಗಿ ಹೋಗಿದ್ದಾರೆ. ಕಂಡರಿಯದ ಭೀಕರ ಪ್ರವಾಹಕ್ಕೆ ಉತ್ತರ ಕರ್ನಾಟಕ ಮಂದಿ ಬೆಚ್ಚಿಬಿದ್ದಿದ್ದಾರೆ. ಒಂದು ತಿಂಗಳ ಹಿಂದೆ ನೀರಿಲ್ಲದ ಸಂಕಟ ಪಟ್ಟವರು ಈಗ ನೀರಿನಿಂದಲೇ ಜೀವನ ಹೋಯಿತು ಎಂದು ಕಣ್ಣೀರಿಟ್ಟಿದ್ದಾರೆ.
ರಾಜ್ಯವನ್ನೇ ಬೆಚ್ಚಿಬೀಳಿಸಿದ ಪ್ರವಾಹಕ್ಕೆ ಅಪಾರ ಸಾವು-ನೋವು ಸಂಭವಿಸಿದ್ದು, ಜನ-ಜಾನುವಾರುಗಳ ಸಾವಿನ ಸಂಖ್ಯೆ ಎರುತ್ತಲೆ ಇದೆ. ಈ ಬಾರಿ ಪ್ರವಾಹಕ್ಕೆ 10 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. ರಾಜ್ಯದಲ್ಲಿ ಆದ ಪ್ರವಾಹ ನಷ್ಟ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾನುವಾರ ವೈಮಾನಿಕ ಪರಿಶೀಲನೆ ನಡೆಸಿದ್ದು, 100 ಕೋಟಿ ಪರಿಹಾರ ನೀಡಿದ್ದಾರೆ. ಸಿಎಂ ಯಡಿಯೂರಪ್ಪ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡುತ್ತಲಿದ್ದು, ಸಂತ್ರಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ಜನ-ಜಾನುವಾರು, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ಸಿಎಂ ಕಚೇರಿಯಿಂದ ಅಂಕಿಅಂಶ ಬಿಡುಗಡೆ ಮಾಡಲಾಗಿದ್ದು, ಪ್ರವಾಹದಿಂದಾಗಿ 42 ಜನರು ಸಾವನ್ನಪ್ಪಿದ್ದಾರೆ.
ಆಗಸ್ಟ್ 1ರಿಂದ ತೀವ್ರಗೊಂಡಿದ್ದ ಪ್ರವಾಹದ ಕುರಿತು ವಿವರ ಬಿಡುಗಡೆಯಾಗಿದ್ದು, ಅದರ ವಿವರ ಇಂತಿದೆ.
- ಪ್ರವಾಹದಿಂದ ಸಾವನ್ನಪ್ಪಿರುವವರ ಸಂಖ್ಯೆ-42
- ಪ್ರವಾಹದಿಂದ ಕಣ್ಮರೆಯಾದವರ ಸಂಖ್ಯೆ-12
- ಪ್ರವಾಹದಿಂದ ಸಾವನ್ನಪ್ಪಿದ ಜಾನುವಾರುಗಳ ಸಂಖ್ಯೆ-548
- ಪ್ರವಾಹದಿಂದ ಹಾನಿಗೊಳಗಾದ ತಾಲೂಕುಗಳು-86
- ಪ್ರವಾಹದಿಂದ ಕೊಚ್ಚಿಹೋದ ಗ್ರಾಮಗಳು-2694
- ಆಗಸ್ಟ್1ರಿಂದ ಇಂದಿನವರೆಗೆ ಪ್ರವಾಹದಿಂದ ರಕ್ಷಿಸಿದ ಜನರ ಸಂಖ್ಯೆ-5,81,897
- ಒಟ್ಟು ತೆರೆದಿರುವ ಗಂಜಿ ಕೇಂದ್ರಗಳು-1181
- ಗಂಜಿ ಕೇಂದ್ರದಲ್ಲಿರುವ ಜನರ ಸಂಖ್ಯೆ-3,32,629
- ಪ್ರವಾಹದಿಂದ ಒಟ್ಟು ರಕ್ಷಿಸಿರುವ ಜಾನುವಾರುಗಳು-50,595
- ಶಿಬಿರದಲ್ಲಿರುವ ಪ್ರಾಣಿಗಳು-32.305
- ನಷ್ಟವಾಗಿರುವ ಬೆಳೆಗಳು-4,21,514 ಹೆಕ್ಟೇರ್
- ಹಾನಿಗೊಳಗಾಗಿರುವ ಮನೆಗಳು-31,800