ಬೆಂಗಳೂರು,ಆ.10- ಕಾವೇರಿ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತ ನೋಡಲು ಬರುವ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಬಿನಿ ಜಲಾಶಯದ ಹೊರ ಹರಿವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಲಪಾತ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ.
ಅಪಾಯದ ಮಟ್ಟ ಮೀರಿ ನೀರು ಬರುತ್ತಿರುವುದರಿಂದ ಪ್ರವಾಸಿಗರು ನದಿಗೆ ಇಳಿಯುವುದಕ್ಕೆ ಹಾಗೂ ತೆಪ್ಪ ಸವಾರಿ ನಡೆಸುವುದಕ್ಕೆ ನಿಷೇಧಿಸಲಾಗಿದೆ. ಜಲಪಾತದ ಸುತ್ತಮುತ್ತಲಿನ ಗ್ರಾಮಗಳಾದ ಜಮ್ಮಕುಟ್ಟಿ, ಆಲಂಬಾಂಡಿ ಮಾರಿಕೋಟೈ, ಗೋಫಿನಾಥಂ, ಆತೂರು, ಕೋಟೊಯೂರು, ವಿವಿಧ ಗ್ರಾಮಗಳಲ್ಲಿನ ಜನರು ನದಿ ದಡಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.
ಅಲ್ಲದೆ ಸ್ಥಳದಲ್ಲಿ ಈಗಾಗಲೇ 50ಕ್ಕೂ ಹೆಚ್ಚು ನುರಿತ ಈಜುಗಾರರ ನಿಯೋಜಿಸಲಾಗಿದ್ದು, ಯಾವುದೇ ಅವಘಡಗಳಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿಕೊಂಡಿದೆ.