ಶಿವಮೊಗ್ಗದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾನದಿ

ಬೆಂಗಳೂರು,ಆ.10- ಮಲೆನಾಡಿನ ಹೆಬ್ಬಾಗಿಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ನೀರಿನ ಮಟ್ಟ ಉಕ್ಕಿ ಹರಿಯುತ್ತಿರುವುದರಿಂದ ಬಹುತೇಕ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ.

ಪರಿಣಾಮ ಶಿವಮೊಗ್ಗಕ್ಕೆ ಬರುವ ಮತ್ತು ಹೊರಹೋಗುವ ಬಸ್, ಸರಕು ಸಾಗಾಣಿಕೆಯ ವಾಹನಗಳು, ಆಟೋಗಳು ಸೇರಿದಂತೆ ಇತರೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ-ತೀರ್ಥಹಳ್ಳಿ, ಶಿವಮೊಗ್ಗ-ಸಾಗರ, ಶಿವಮೊಗ್ಗ-ಸೊರಬ, ಶಿವಮೊಗ್ಗ-ಹೊನ್ನಾಳಿ, ಶಿವಮೊಗ್ಗ-ಕೊಲ್ಲೂರು ರಸ್ತೆಗಳನ್ನು ಸದ್ಯಕ್ಕೆ ಬಂದ್ ಮಾಡಲಾಗಿದೆ.

ಯಾವುದೇ ವಾಹನಗಳು ನೀರಿನ ಮಟ್ಟ ಇಳಿಯಮುಖವಾಗುವವರೆಗೂ ರಸ್ತೆಗೆ ಇಳಿಯಬಾರದೆಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಶ್ರೀಕ್ಷೇತ್ರ ಸಾಗರದಲ್ಲಿರುವ ಸಿಗಂದೂರಿಗೆ ಭಕ್ತಾದಿಗಳು ಬಾರದಂತೆ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ. ಶರಾವತಿ ಹಿನ್ನೀರು ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ತುರ್ತು ಕ್ರಮವನ್ನು ಕೈಗೊಳ್ಳಲಾಗಿದೆ.

ಭಾರೀ ಮಳೆಯಿಂದಾಗಿ ಸಂಪೆಕಟ್ಟೆ ರಸ್ತೆ ಕೊಚ್ಚಿ ಹೋಗಿರುವುದರಿಂದ ಸಿಗಂದೂರು ರಸ್ತೆಯನ್ನು ಸಹ ಬಂದ್ ಮಾಡಲಾಗಿದ್ದು, ಮಡೋಡಿ, ಸಂಪೆಕಟ್ಟೆ, ಗೌರಿಕೆರೆ ಸೇರಿ ಕೊಲ್ಲೂರುವರೆಗು ಸುಮಾರು 80 ಗ್ರಾಮಗಳು ಜಲಾವೃತವಾಗಿವೆ.

ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕಳೆದ ರಾತ್ರಿ ಇದ್ದಕ್ಕಿದ್ದಂತೆ ತುಂಗಾನದಿ ಉಕ್ಕಿ ಹರಿದ ಪರಿಣಾಮ ಶಿವಮೊಗ್ಗ ನಗರದ ಅನೇಕ ಕಡೆ ನಗರಗಳಿಗೆ ನೀರು ನುಗ್ಗಿದೆ. ಪರಿಣಾಮ ನೂರಾರು ಮನೆಗಳು ಜಲಾವೃತವಾಗಿದ್ದು, ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ.

ನಗರದ ಟ್ಯಾಂಕ್ ಮೊಹಲ್ಲಾ ಮಸೀದಿಯಲ್ಲಿ ಸಂತ್ರಸ್ತರಿಗೆ ಪರಿಹಾರ ಕೇಂದ್ರವನ್ನು ಆರಂಭಿಸಲಾಗಿದೆ. ಕ್ಷಣಕ್ಷಣಕ್ಕೂ ತುಂಗಾನದಿ ಉಕ್ಕಿ ಹರಿಯುತ್ತಿರುವುದರಿಂದ ಇನ್ನಷ್ಟು ಹಾನಿಯಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ಇಂದು ಮತ್ತು ನಾಳೆ ಮಳೆ ಮುಂದುವರೆಯುವುದರಿಂದ ನದಿ ಪಾತ್ರದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆಯೂ ಸೂಚಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ