ಮಾರ್ಗ ಬದಲಾವಣೆ ಮಾಡಿ ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಬಸ್ ಸೇವೆ

ಬೆಂಗಳೂರು, ಆ.8- ಅತಿವೃಷ್ಟಿ ಹಾಗೂ ಪ್ರವಾಹದ ಪರಿಣಾಮ ಮಾರ್ಗ ಬದಲಾವಣೆ ಮಾಡಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ಕೆಎಸ್‍ಆರ್‍ಟಿಸಿ ಬಸ್ ಸೇವೆಯನ್ನು ಒದಗಿಸಿದೆ.

ಬೆಳಗಾವಿ ಹಾಗೂ ಕೊಲ್ಹಾಪುರದ ನಡುವಿನ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಪುಣೆ, ಮುಂಬೈ, ಶಿರಡಿಗೆ ತೆರಳಬೇಕಿದ್ದ ಬಸ್‍ಗಳು ವಿಜಯಪುರ, ಸೋಲ್ಹಾಪುರ ಮಾರ್ಗವಾಗಿ ತೆರಳುತ್ತಿವೆ ಎಂದು ಕೆಎಸ್‍ಆರ್‍ಟಿಸಿ ತಿಳಿಸಿದೆ.

ಈ ಮಾರ್ಗ ಸಂಚಾರಕ್ಕೆ ಯೋಗ್ಯವಾಗಿರುವುದರಿಂದ ಬಸ್ ಸೇವೆ ಕಲ್ಪಿಸಲಾಗಿದೆ. ವಾರಾಂತ್ಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಸಾಮಾನ್ಯ ದರದಲ್ಲಿ ಪರ್ಯಾಯ ಮಾರ್ಗದಲ್ಲಿ ಬಸ್ ಸೇವೆ ಒದಗಿಸಿದ್ದು, ಪ್ರಯಾಣಿಕರ ಅಗತ್ಯತೆಗೆ ಅನುಗುಣವಾಗಿ ಬಸ್ ಸೇವೆಯನ್ನು ಒದಗಿಸಲಾಗುತ್ತಿದೆ ಕೆಎಸ್‍ಆರ್‍ಟಿಸಿ ತಿಳಿಸಿದೆ.

ಅದೇ ರೀತಿ ಬೆಂಗಳೂರಿನಿಂದ ಗೋವಾ, ಪಣಜಿಗೆ ತೆರಳುತ್ತಿದ್ದ ಬಸ್ ಮಾರ್ಗಗಳನ್ನು ಬದಲಿಸಿದ್ದು, ಮಂಗಳೂರು, ಕುಂದಾಪುರ, ಬಟ್ಕಳ ಮಾರ್ಗವಾಗಿ ಪಣಜಿಗೆ ಬಸ್‍ಗಳು ತೆರಳುತ್ತಿವೆ. ಮಾರ್ಗ ಬದಲಾವಣೆಯಿಂದ ಸುಮಾರು 70ಕಿಮೀ ದೂರ ಕ್ರಮಿಸಬೇಕಾಗಿದ್ದು, ಸಾಮಾನ್ಯ ದರವನ್ನು ನಿಗದಿಪಡಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಮೂಲಗಳು ತಿಳಿಸಿವೆ.

ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ನೆಲ್ಯಾಡಿ ಮತ್ತು ಉಡಾನೆ ಬಳಿ ಎಲ್ಲಾ ಬಸ್ ಸೇವೆಯನ್ನಾ ಮಂಗಳೂರು ಕಡೆಗೆ ಮಾರ್ಗ ಬದಲಿಸಲಾಗಿದೆ. ಮಾರ್ಕಲಾ, ಕೈಕಂಬ, ಗುಂಡ್ಯ ಮಾರ್ಗವಾಗಿ ಬಸ್‍ಗಳು ಸಂಚರಿಸುತ್ತಿವೆ ಎಂದು ಕೆಎಸ್‍ಆರ್‍ಟಿಸಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ