ಬಳ್ಳಾರಿ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.
ನೆರೆ ಹಾನಿಗೀಡಾದ ಪ್ರದೇಶಗಳ ವೀಕ್ಷಣೆ ನಡೆಸಲು ಬಳ್ಳಾರಿಯ ತೋರಣಗಲ್ಲುವಿನ ಜಿಂದಾಲ್ ಏರ್ ಸ್ಟ್ರೀಪ್ ಗೆ ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ಶಾಸಕ ಸೋಮಶೇಖರ್ ರೆಡ್ಡಿ ಮನವಿ ಮಾಡಿದರು.
ತುಂಗಾಭದ್ರಾ- ಕೃಷ್ಣೆ ಜೋಡಿಸಲು ಸಿಎಂ ಬಿಎಸ್ವೈಗೆ ಶಾಸಕ ಸೋಮಶೇಖರ್ ರೆಡ್ಡಿ ಮನವಿ ಮಾಡಿದ್ದು, ಈ ಮೂಲಕ ತ್ರೀವಳಿ ಜಿಲ್ಲೆಗಳ ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆ ನೀಗಿಸಿದಂತಾಗುತ್ತದೆ ಎಂದು ಅವರು ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ.
ಶಾಸಕ ಸೋಮಶೇಖರ್ ರೆಡ್ಡಿ ಅವರ ಮನವಿಯನ್ನು ಅತ್ಯಂತ ಸಮಾಧಾನದಿಂದ ಆಲಿಸಿದ ಸಿಎಂ ಬಿಎಸ್ವೈ, ಇದಕ್ಕೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಯೊಂದನ್ನು ನೀಡಿ ಮುಂದಿನ ಬಜೆಟ್ ನಲ್ಲಿ ಘೋಷಿಸಿ ಅನುಷ್ಠಾನಗೊಳಿಸೋಣ ಎಂದಿದ್ದಾರೆ ಎನ್ನಲಾಗಿದೆ.
ನಂತರ ಶಾಸಕ ಸೋಮಶೇಖರ್ ರೆಡ್ಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತ್ರಿವಳಿ ಜಿಲ್ಲೆಗಳ ಹಾಗೂ ನೆರೆಯ ರಾಜ್ಯದ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯ ಇದುವರೆಗೂ ತುಂಬಿಲ್ಲ. ಕೇವಲ 30 ಟಿಎಂಸಿ ನೀರು ಮಾತ್ರ ಇದೆ. ಇನ್ನೂ 70 ಟಿಎಂಸಿ ನೀರಿನ ಅಗತ್ಯ ಇದೆ ಎಂದರು.
ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಯಿಂದ ಹರಿಬಿಡಲಾಗುತ್ತಿದ್ದು, ಅದು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಕೃಷ್ಣೆಯನ್ನು ನಮ್ಮ ಜಲಾಶಯಕ್ಕೆ ಕನೆಕ್ಷನ್ ಕೊಡಿಸಿದರೇ ನೀರು ಸದ್ಭಳಕೆಯಾಗುತ್ತದೆ ಎಂದರು.
ಜಿಲ್ಲೆಗಳ ನಿಯೋಗವನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳಿಗೆ ವಿಸ್ತೃತ ಯೋಜನೆ ವಿವರಿಸಿ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು. ಬಿಎಸ್ ವೈ ಮತ್ತು ಶ್ರೀರಾಮುಲು ಅವರ ನೇತೃತ್ವದಲ್ಲಿ ಇದು ಸಾಕಾರಗೊಂಡರೇ ರೈತರ ಬದುಕು ಬಂಗಾರವಾಗಲಿದೆ ಮತ್ತು ಕುಡಿಯುವ ನೀರಿನ ಸಮಸ್ಯೆಯೂ ಉದ್ಭವಿಸಿವುದಿಲ್ಲ ಎಂದು ಅವರು ತಿಳಿಸಿದರು.