ನವದೆಹಲಿ/ಶ್ರೀನಗರ, ಮಾ.30-ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಶಾಲೆಯೊಂದರ ಕಟ್ಟಡ ನಿರ್ಮಾಣಕ್ಕಾಗಿ ಮಾಜಿ ಕ್ರಿಕೆಟ್ ದಿಗ್ಗಜ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ 40 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ (ಎಂಪಿಎಲ್ಎಡಿ) ನಿಧಿಯಿಂದ ಸಚಿನ್ ಈ ಮೊತ್ತವನ್ನು ಮಂಜೂರು ಮಾಡಿದ್ದು, ಇದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೃತಜ್ಞತೆ ಸಲ್ಲಿಸಿದ್ದಾರೆ.
2007ರಲ್ಲಿ ಸ್ಥಾಪನೆಯಾದ ಡ್ರಗ್ ಮುಲ್ಲಾದಲ್ಲಿನ ಇಂಪಿರಿಯಲ್ ಎಜುಕೇಷನಲ್ ಇನ್ಸ್ಟಿಟ್ಯೂಟ್ ಅಲ್ಲಿನ ಏಕಮಾತ್ರ ಶಾಲೆಯಾಗಿದೆ. ಇಲ್ಲಿ ಒಂದರಿಂದ 10ನೇ ತರಗತಿವರೆಗೆ ಶಿಕ್ಷಣ ಸೌಲಭ್ಯವಿದ್ದು, ಪ್ರಸ್ತುತ ಸುಮಾರು 1,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಗೆ ಹೆಚ್ಚುವರಿ ಕಟ್ಟಡದ ಅಗತ್ಯವಿತ್ತು. ಇದನ್ನು ಮನಗಂಡಿರುವ ಸಚಿನ್ 40 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದಾರೆ.