150ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಭೀತಿ

ಬೆಂಗಳೂರು ,ಮಾ.30- ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಾಡಲು ಸಿದ್ಧವಾಗುತ್ತಿದ್ದಂತೆ ಟಿಕೆಟ್ ವಂಚಿತರು ಬಂಡಾಯ ಸಾರಲು ಸಜ್ಜಾಗುತ್ತಿದ್ದಾರೆ.
ಹಾಲಿ ಶಾಸಕರನ್ನು ಹೊರತುಪಡಿಸಿ ಉಳಿದಿರುವ 150ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯದ ಭೀತಿ ಎದುರಿಸುತ್ತಿದ್ದು , ಅಭ್ಯರ್ಥಿಗಳ ಗೆಲುವಿಗೆ ಮುಂದೆ ಇವರು ತೊಡರುಗಾಲಾಗಬಹುದೆಂಬ ಆತಂಕ ಕಾಡುತ್ತಿದೆ.

ಸಮೀಕ್ಷಾ ವರದಿ ಹಾಗೂ ಜಿಲ್ಲಾ ಸಮಿತಿ ಶಿಫಾರಸು ಮಾಡಿದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವುದಾಗಿ ವರಿಷ್ಠರು ಹೇಳುತ್ತಿದ್ದಾರೆ. ಸದ್ಯಕ್ಕೆ ಬಿಜೆಪಿ-ಕೆಜೆಪಿ, ಬಿಎಸ್‍ಆರ್ ಸೇರಿದಂತೆ 50 ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ಖಚಿತವಾಗಿದೆ.
ಉಳಿದಂತೆ ಟಿಕೆಟ್ ತಮಗೆ ಸಿಕ್ಕೇ ಸಿಗುತ್ತದೆ ಎಂದು ಮನಸ್ಸಿನಲ್ಲೇ ಮಂಡಕ್ಕಿ ಮೇಯುತ್ತಿರುವವರು ಟಿಕೆಟ್ ಕೈ ತಪ್ಪಿದರೆ ಬಂಡಾಯ ಸಾರಲು ಇಲ್ಲವೇ ಬೇಲಿ ಹಾರಲು ಸಜ್ಜಾಗಿದ್ದಾರೆ. ಪಕ್ಷದಲ್ಲಿ ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ವರಿಷ್ಠರು ಸೂಚಿಸಿದ್ದರೂ ಆಕಾಂಕ್ಷಿಗಳು ಮಾತ್ರ ಯಾರೊಬ್ಬರ ಮಾತು ಕೇಳುವ ವ್ಯವಧಾನದಲ್ಲಿಲ್ಲ.

ಸರಿಸುಮಾರು 50ರಿಂದ 70 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಲ್ಲಿ ಬಂಡಾಯ ಅಭ್ಯರ್ಥಿಗಳೇ ಎದುರಾಳಿಯಾಗುವ ಸಂಭವ ಹೆಚ್ಚಿದೆ. ಟಿಕೆಟ್ ಕೊಡದಿದ್ದರೆ ಅನ್ಯಪಕ್ಷಗಳ ಜೊತೆ ಕೈ ಜೋಡಿಸಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನೇ ಸೋಲಿಸಬಹುದು ಇಲ್ಲವೇ ಪಕ್ಷದೊಳಗಿದ್ದು ಬೇರೆಯೊಬ್ಬರಿಗೆ ಬೆಂಬಲ ನೀಡಬಹುದೆಂಬ ಆತಂಕ ಮನೆ ಮಾಡಿದೆ.

ಎಲ್ಲೆಲ್ಲಿ ಬಂಡಾಯ:
ಬಿಜೆಪಿಯ ಮೊದಲ ಬಂಡಾಯ ಕಂಡುಬರುತ್ತಿರುವುದೇ ಪಕ್ಷದ ಶಕ್ತಿ ಕೇಂದ್ರ ಶಿವಮೊಗ್ಗದಲ್ಲಿ. ಪಕ್ಷದ ಹಿರಿಯ ಮುಖಂಡ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ , ಶಿವಮೊಗ್ಗನಗರ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.
ಈ ಕ್ಷೇತ್ರದಿಂದ ಸ್ಪರ್ಧಿಸಲು ಯಡಿಯೂರಪ್ಪನವರ ಆಪ್ತ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇದುವೇ ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇದೇ ರೀತಿ ಸಾಗರ ಹಾಗೂ ಸೊರಬದಲ್ಲೂ ಬಂಡಾಯದ ಭೀತಿ ಎದುರಾಗಿದೆ. ಈ ಮೊದಲು ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಬಿಜೆಪಿ ಅಭ್ಯರ್ಥಿಯೆಂದೇ ಹೇಳಲಾಗಿತ್ತು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸೊರಬದಿಂದ ಮಾಜಿ ಸಚಿವ ಕುಮಾರ್ ಬಂಗಾರಪ್ಪ , ಸಾಗರದಿಂದ ಮಾಜಿ ಸಚಿವ ಹರತಾಳ್ ಹಾಲಪ್ಪ ಕಣಕ್ಕಿಳಿಸಲು ಬಿಜೆಪಿ ಲೆಕ್ಕಾಚಾರ ಹಾಕಿದೆ.

ಸಾಗರದಿಂದ ಟಿಕೆಟ್ ಕೈ ತಪ್ಪಿದರೆ ಬೇಳೂರು ಬಂಡಾಯ ಸಾರಬಹುದೆಂಬ ಮಾತು ಕೇಳಿಬರುತ್ತಿದೆ. ಇನ್ನು ಹೊನ್ನಾಳಿಯಲ್ಲೂ ಕೂಡ ಇದೇ ಪರಿಸ್ಥಿತಿ ಇದೆ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಾವೇ ಅಭ್ಯರ್ಥಿ ಎಂದು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.
ಅವರಿಗೆ ಪ್ರಬಲ ಸ್ಪರ್ಧಿಯಾಗಿ ಮಾಜಿ ಶಾಸಕ ಡಾ.ಡಿ.ವಿ.ಗಂಗಪ್ಪ ಆಕಾಂಕ್ಷಿಯಾಗಿರುವುದು ನುಂಗಲಾರದ ತುತ್ತಾಗಿದೆ. ಹರಿಹರದಲ್ಲೂ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಮಾಜಿ ಶಾಸಕ ಬಿ.ಪಿ.ಹರೀಶ್ ತಾನೇ ಅಭ್ಯರ್ಥಿ ಎಂದು ಹೇಳುತ್ತಿದ್ದರೆ ಪೆÇಲೀಸ್ ಅಧಿಕಾರಿಯಾಗಿದ್ದ ದೇವೇಂದ್ರಪ್ಪ ಅಖಾಡಕ್ಕಿಳಿದಿರುವುದು ಬಿಜೆಪಿ ನಾಯಕರಿಗೆ ಕಸಿವಿಸಿ ಉಂಟು ಮಾಡಿದೆ.

ನೆರೆಯ ಹರಪ್ಪನಹಳ್ಳಿಯಲ್ಲೂ ಮಾಜಿ ಸಚಿವ ಕರುಣಾಕರ ರೆಡ್ಡಿ ಹಾಗೂ ಕೊಟ್ರೇಶ್ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಉಳಿದಂತೆ ಇತರೆ ಕ್ಷೇತ್ರಗಳಲ್ಲಿ ಪರೋಕ್ಷವಾಗಿ ಅಭ್ಯರ್ಥಿಗಳಿಗೆ ಪ್ರಚಾರ ನಡೆಸುವಂತೆ ಸೂಚಿಸಲಾಗಿದೆ.
ಗಡಿ ಜಿಲ್ಲೆ ಚಾಮರಾಜನಗರ ಹಾಗೂ ಸಾಂಸ್ಕøತಿಕ ನಗರಿ ಮೈಸೂರಿನಲ್ಲೂ ಬಿಜೆಪಿ ಬಂಡಾಯ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಚಾಮರಾಜನಗರ ಕ್ಷೇತ್ರದಿಂದ ಪೆÇ್ರ.ಮಲ್ಲಿಕಾರ್ಜುನಪ್ಪ ಆಕಾಂಕ್ಷಿಯಾಗಿದ್ದರೆ ಅವರಿಗೆ ಮತ್ತೋರ್ವ ಆಕಾಂಕ್ಷಿ ಅಡ್ಡಿಯಾಗಿದ್ದಾರೆ.

ಹನೂರಿನಲ್ಲಿ ಮಾಜಿ ಸಚಿವ ದಿ.ನಾಗಪ್ಪನವರ ಪುತ್ರ ಪ್ರೀತಂ ನಾಗಪ್ಪ ಈಗಾಗಲೇ ಪ್ರಚಾರ ಆರಂಭಿಸಿದ್ದರೆ , ಮಾಜಿ ಸಚಿವ ವಿ.ಸೋಮಣ್ಣ ಕೂಡ ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಇಬ್ಬರು ಕೂಡ ತಮಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ.
ಇನ್ನು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಮಾಜಿ ಸಚಿವ ರಾಮದಾಸ್‍ಪ್ರಬಲ ಆಕಾಂಕ್ಷಿಯಾಗಿದ್ದರೆ ಇದೇ ಕ್ಷೇತ್ರದಿಂದ ಪಕ್ಷದ ವಕ್ತಾರೆ ಮಾಳವಿಕ ಕೂಡ ತನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಜ್ಯೋತಿ ರೆಡ್ಡಿ ಹಾಗೂ ಜೈಪಾಲ್ ರೆಡ್ಡಿ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಇತ್ತ ಬರದ ನಾಡು ಚಿತ್ರದುರ್ಗದ ಕೆಲವು ಕ್ಷೇತ್ರಗಳಲ್ಲಿ ಬಂಡಾಯದ ಕಾವು ಜೋರಾಗಿದೆ.
ಮೊಳಕಾಲ್ಮೂರಿನಲ್ಲಿ ಹಾಲಿ ಶಾಸಕ ಕುಮಾರಸ್ವಾಮಿ ಟಿಕೆಟ್ ಖಾತ್ರಿಯಾಗಿದ್ದರೂ ಸಂಸದ ರಾಮುಲು ಇಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹಬ್ಬಿದೆ.
ಹಿರಿಯೂರು, ಚಳ್ಳಕೆರೆ, ಹೊಸದುರ್ಗದಲ್ಲಿ ಕೂಡ ಭಿನ್ನಮತವೇನೂ ಕಡಿಮೆಯಿಲ್ಲ. ಇದ್ದುದರಲ್ಲೇ ಹೊಳಲ್ಕೆರೆಯಿಂದ ಚಂದ್ರಪ್ಪ , ಚಿತ್ರದುರ್ಗದಿಂದ ತಿಪ್ಪಾರೆಡ್ಡಿಗೆ ಟಿಕೆಟ್ ಬಹುತೇಕ ಖಾತರಿಯಾಗಿದೆ.
ಅಕ್ರಮ ಗಣಿಗಾರಿಕೆಯಿಂದಲೇ ದೇಶದ ಗಮನಸೆಳೆದಿದ್ದ ಗಣಿ ನಾಡು ರಿಪಬ್ಲಿಕನ್ ಬಳ್ಳಾರಿ ಎಂದೇ ಕರೆದಿದ್ದ ಬಳ್ಳಾರಿ ಜಿಲ್ಲೆಯಲ್ಲೂ ಅಲ್ಲಲ್ಲಿ ಬಂಡಾಯ ಕಂಡುಬಂದಿದೆ.
ಟಿಕೆಟ್ ಹಂಚಿಕೆಯನ್ನು ಸಂಸದ ರಾಮುಲು ಹೆಗಲಿಗೆ ನೀಡಲಾಗಿದೆ. ಈವರೆಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಶಾಸಕರಾದ ಆನಂದ್ ಸಿಂಗ್ ಹಾಗೂ ನಾಗೇಂದ್ರ ಕಾಂಗ್ರೆಸ್ ಸೇರಿರುವುದು ಲೆಕ್ಕಾಚಾರ ಉಲ್ಟಾ ಮಾಡಿದೆ.

ವಿಜಯನಗರದಿಂದ ಗವಿಯಪ್ಪಗೆ ಬಹುತೇಕ ಟಿಕೆಟ್ ಖಾತರಿಯಾಗಿದೆ. ಬಳ್ಳಾರಿ ಗ್ರಾಮೀಣ, ಸಂಡೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿಲ್ಲ. ಬಳ್ಳಾರಿ ನಗರಕ್ಕೆ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಹಗರಿ ಬೊಮ್ಮನಹಳ್ಳಿಗೆ ನೇಮಿರಾಜ ನಾಯಕ್, ಕಂಪ್ಲಿಗೆ ಸುರೇಶ್ ಬಾಬು, ಕೂಡ್ಲಗಿಗೆ ಮುತ್ತಯ್ಯ ಆಕಾಂಕ್ಷಿಯಾಗಿದ್ದಾರೆ.

ಕೊಪ್ಪಳ , ರಾಯಚೂರು, ಬೀದರ್, ಯಾದಗಿರಿ, ಕಲ್ಬುರ್ಗಿ ಸೇರಿದಂತೆ ಅನೇಕ ಕಡೆ ಬಂಡಾಯ ಅಭ್ಯರ್ಥಿಗಳು ಟಿಕೆಟ್‍ಗಾಗಿ ಪಟ್ಟು ಹಿಡಿದಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಈಗಾಗಲೇ ತಾನೇ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ.
ಆದರೆ ಅವರಿಗೆ ವಿಧಾನಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನ ಮರದ ಸೆಡ್ಡು ಹೊಡೆದಿದ್ದಾರೆ. ಹೀಗೆ ಬಹುತೇಕ ಕಡೆ ಬಂಡಾಯವೆದ್ದಿರುವುದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ