ಬೆಂಗಳೂರು, ಆ.3- ಉದ್ಯೋಗವರಸಿ ಬಂದಿದ್ದ ವಿಕಲಚೇತನರೊಬ್ಬರಿಗೆ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಳದಲ್ಲಿಯೇ ಆದೇಶ ನೀಡಿದರು.
ಡಾಲರ್ಸ್ ಕಾಲೋನಿಯ ಅವರ ನಿವಾಸಕ್ಕೆ ನಾಗೇಶ್ ಎಂಬುವರು ಕುಟುಂಬದ ಸದಸ್ಯರ ಜೊತೆ ಆಗಮಿಸಿದ್ದರು. ಮನೆಯಲ್ಲಿ ಇಬ್ಬರು ವಿಕಲಚೇತನರಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ ಎಂದು ಯಡಿಯೂರಪ್ಪನವರಲ್ಲಿ ಅಳಲು ತೋಡಿಕೊಂಡರು.
ತನಗೊಂದು ಕೆಲಸ ಕೊಟ್ಟರೆ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ. ನಮ್ಮ ಮನವಿಯನ್ನು ದಯವಿಟ್ಟು ಸಕಾರಾತ್ಮಕವಾಗಿ ಪರಿಗಣಿಸಿ ಎಂದು ನಾಗೇಶ್ ಕೋರಿದರು.
ಇದಕ್ಕೆ ತಕ್ಷಣವೇ ನಾಗೇಶ್ ಗುತ್ತಿಗೆ ಆಧಾರದ ಮೇಲೆ ವಿಧಾನಸೌಧದಲ್ಲಿ ಕೆಲಸ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗರಂ ಆದ ಬಿಎಸ್ವೈ:
ಇದೇ ವೇಳೆ ಯಡಿಯೂರಪ್ಪನವರಿಗೆ ಪೇಟಾ ತೊಡಿಸಲು ಬಂದಿದ್ದ ಅಭಿಮಾನಿಗಳನ್ನು ಕಂಡು ಗರಂ ಆದ ಪ್ರಸಂಗವೂ ನಿವಾಸದ ಬಳಿ ನಡೆಯಿತು.
ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಬೃಹದಾಕಾರದ ಹೂವಿನ ಹಾರ ಹಾಕಿ ತಲೆಗೆ ಪೇಟಾ ತೊಡಿಸಲು ಬಂದರು. ಮೊದಲು ಇದನ್ನು ಯಡಿಯೂರಪ್ಪ ನಿರಾಕರಿಸಿದರು. ಬಲವಂತವಾಗಿ ಹಾಕಲು ಮುಂದಾಗುತ್ತಿದ್ದಂತೆ ಪೇಟಾವನ್ನು ಕಿತ್ತುಕೊಂಡು ತಮ್ಮ ಆಪ್ತರ ಕೈಗಿಟ್ಟರು.
ಬಳಿಕ ಯಡಿಯೂರಪ್ಪ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಕೆಲವರಿಗೆ ಸ್ಥಳದಲ್ಲಿಯೇ ಪರಿಹಾರವನ್ನು ಒದಗಿಸಿದರು.