ಉದ್ಯಮಿ ಸಿದ್ಧಾರ್ಥ್ ಸಾವಿನ ಪ್ರಕರಣ-ಮರಣೋತ್ತರ ಪರೀಕ್ಷೆಯ ಅಂತಿಮ ವರದಿಗೆ ಸಮಯ ಬೇಕು

ಬೆಂಗಳೂರು,ಆ.3- ಉದ್ಯಮಿ ಸಿದ್ದಾರ್ಥ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬರಲು ಸಾಕಷ್ಟು ಸಮಯ ಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಪ್ರಕರಣದ ಅಂತಿಮ ಹಾಗೂ ಪೂರ್ಣ ವರದಿ ತನಿಖಾಧಿಕಾರಿಯ ಕೈ ಸೇರಲು ಕನಿಷ್ಠ ಎರಡು ತಿಂಗಳ ಸಮಯ ಬೇಕಾಗುತ್ತದೆ ಎಂದು ವಿವರಿಸಿದರು.

ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಬರಬೇಕು. ಆ ವರದಿಗಳು ಬಂದ ನಂತರವೇ ಉದ್ಯಮಿ ಸಿದ್ದಾರ್ಥ್ ಅವರ ಸಾವು ಹೇಗೆ ಸಂಭವಿಸಿತು, ಕಾರಣವೇನು ಎಂಬುದು ನಿಖರವಾಗಿ ತಿಳಿದುಬರಲಿದೆ ಎಂದು ಅವರು ಹೇಳಿದರು.

ಸಿದ್ದಾರ್ಥ್ ಅವರು ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷಾ ವರದಿಗಳು ತಿಳಿಸಿವೆ. ಈ ಬಗ್ಗೆ ವರದಿಗಳನ್ನು ವೈದ್ಯರು ತನಿಖಾಧಿಕಾರಿಗಳಿಗೆ ನಿನ್ನೆ ನೀಡಿದ್ದಾರೆ.

ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಅವರ ಸಾವಿನ ಬಗ್ಗೆ ಮಂಗಳೂರು ನಗರ ಪೊಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತೀವ್ರ ತನಿಖೆ ನಡೆಸುತ್ತಿದ್ದಾರೆ. ಅವರ ಸಾವಿಗೆ ಮೂಲ ಕಾರಣ ಯಾವುದು ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ತನಿಖಾ ತಂಡಗಳು ಈಗಾಗಲೇ ಬೆಂಗಳೂರು ಹಾಗೂ ಮತ್ತಿತರ ಕಡೆ ತೆರಳಿ ಮಾಹಿತಿಯನ್ನು ಕಲೆ ಹಾಕಿವೆ ಮತ್ತೆ ಕೆಲವರನ್ನು ವಿಚಾರಣೆಗೊಳಪಡಿಸಿ ವಿಷಯ ಸಂಗ್ರಹಿಸಿವೆ.

ಬೇರೆ ರಾಜ್ಯಗಳಿಗೂ ತೆರಳಿ ಸಿದ್ದಾರ್ಥ್ ಅವರ ಸ್ನೇಹಿತರು, ಪಾಲುದಾರರು ಮತ್ತಿತರರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲು ತನಿಖಾ ತಂಡ ನಿರ್ಧರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ